ದೆಹಲಿಗೆ ತೆರಳಿದ ಕಬ್ಬು ಬೆಳೆಗಾರ ರೈತರು: ಇಂದು 3 ಗಂಟೆಗೆ ಬೆಲೆ ನಿಗದಿಗೆ ಕೇಂದ್ರದೊಂದಿಗೆ ಸಮಾಲೋಚನೆ
ನವ ದೆಹಲಿಗೆ ಪ್ರಯಾಣ ಬೆಳೆಸಿರುವ ರೈತ ಹೋರಾಟಗಾರರು ತಮ್ಮ ಬೇಡಿಕೆಗಳನ್ನು ಕೇಂದ್ರದ ಎದುರು ಯಾವ ರೀತಿ ಮಂಡಿಸಿ, ನ್ಯಾಯ ಪಡೆದುಕೊಳ್ಳುತ್ತಾರೆ ಎಂಬುದನ್ನು ಇಂದು ಸಂಜೆಯ ವರೆಗೆ ಕಾಯ್ದು ನೋಡಬೇಕಾಗಿದೆ!
ಅಸ್ಮತೆ ವರದಿ, ಅ.12: ಕಬ್ಬಿನ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬೃಹತ್ ಹೋರಾಟ ನಡೆಸಿ ಸಂಚಲನ ಮೂಡಿಸಿದ ಕಬ್ಬು ಬೆಳೆಗಾರರಲ್ಲಿನ ಈ ಭಾಗದ ಆಯ್ದ 54 ರೈತ ಮುಖಂಡರೊಂದಿಗೆ ಇಂದು ಇಳಿಹೊತ್ತು 3 ಗಂಟೆಗೆ ನವ ದೆಹಲಿಯ ಕೃಷಿ ಭವನದಲ್ಲಿ ಕೇಂದ್ರದ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಸಮಾಲೋಚಿಸಿ ಮನವರಿಕೆ ಮಾಡಲಿದ್ದಾರೆ.

ಕೇಂದ್ರದ ಆಹ್ವಾನದ ಮೇರೆಗೆ ನವ ದೆಹಲಿಗೆ ತೆರಳುತ್ತಿರುವ ರೈತ ಮುಖಂಡರ ನಿಯೋಗದಲ್ಲಿ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ಕಿಶನ ನಂದಿ, ಪಾಂಡುರಂಗ ಭೀಮಾ ಬಿರನಗಡ್ಡಿ, ಗಿರೀಶ್ ಪಾಟೀಲ, ರಾಜು ಅಣ್ಣಾಶೆಟ್ಟಿ, ಮಲ್ಲಪ್ಪ ಅಂಗಡಿ, ಕೆಂಪಣ್ಣ ಅಂಗಡಿ, ಪರಸಪ್ಪಾ ಚಿನಗುಂಡಿ, ಆಸ್ಮಾ ಜೂಟದಾರ, ಶಿವಾನಂದ ದೊಡವಾಡ, ರಾಮಪ್ಪ ಪಿರಗಿ, ಹನಮಂತ ಕುಬಕಡ್ಡಿ, ಶರಣಪ್ಪ ಮಳ್ಳಿ ಸೇರಿದಂತೆ ಬೆಳಗಾವಿ, ಹಾವೇರಿ, ವಿಜಯಪೂರ, ಕೊಪ್ಪಳ, ರಾಯಚೂರು, ಮೈಸೂರು, ಮಂಡ್ಯ, ಉತ್ತರ ಕನ್ನಡ ಜಿಲ್ಲೆ, ಹುಬ್ಬಳ್ಳಿ, ಕಲಬುರ್ಗಿ, ಗದಗ, ಶಿವಮೊಗ್ಗ ಬಾಗಲಕೋಟ, ಮಹಾರಾಷ್ಟ್ರದ ಪುಣೆ,ಕೋರೆಗಾಂವ, ಕೊಲ್ಲಾಪುರ ಜಿಲ್ಲೆಗಳ 54 ರೈತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಸೂಚನೆಯ ಮೇರೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆಯ್ದ ರೈತರ ಪಟ್ಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸಚಿವರ ಸಭೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ.
ಈ ಹಿನ್ನಲೆಯಲ್ಲಿ ಬೆಳಗಾವಿ ಭಾಗದ ಸುಮಾರು 35 ಜನ ರೈತ ಮುಖಂಡರು ಇಂದು ಮುಂಜಾನೆ 8 ಗಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾನದಿಂದ ಪ್ರಯಾಣ ಬೆಳೆಸಿದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ರೈತರು ಬೃಹತ್ ಪ್ರಮಾಣದಲ್ಲಿ ಇತ್ತೀಚೆಗೆ ಸಮಾವೇಶಗೊಂಡು ಕಬ್ಬಿನ ಸೂಕ್ತ ಬೆಲೆ ನಿಗದಿ ಸೇರಿದಂತೆ ತಮ್ಮ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ತುಂಬಾ ಉದ್ವೇಗದಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಏಕ ವಚನದಲ್ಲಿಯೇ ಸಂಬೋಧಿಸಿದ ಹೋರಾಟಗಾರರು ಸಚಿವ ಮನೆಯ ಮೇಲೆ ಮುಕ್ತಿಗೆ ಹಾಕಲು ಮುಂದಾಗಿದ್ದರು. ಈ ಎಲ್ಲ ಬೆಳವಣಿಗೆಯ ಮಧ್ಯ ರೈತ ಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಆಡಳಿತದೊಂದಿಗೆ ಸಭೆ ನಡೆಸಿ ನವದೆಹಲಿಗೆ ಆಗಮಿಸಿ ಸಂಬಂಧಿತ ಕೇಂದ್ರ ಸಚಿವರೊಂದಿಗೆ ಉನ್ನತ ಮಟ್ಟದ ಸಮಾಲೋಚನೆ ನಡೆಸುವ ಬಗ್ಗೆ ತೀಮಾರ್ನಿಸಲಾಯಿತು.
ಈ ಕಾರಣ ನವ ದೆಹಲಿಗೆ ಪ್ರಯಾಣ ಬೆಳೆಸಿರುವ ರೈತ ಹೋರಾಟಗಾರರು ತಮ್ಮ ಬೇಡಿಕೆಗಳನ್ನು ಕೇಂದ್ರದ ಎದುರು ಯಾವ ರೀತಿ ಮಂಡಿಸಿ, ನ್ಯಾಯ ಪಡೆದುಕೊಳ್ಳುತ್ತಾರೆ ಎಂಬುದನ್ನು ಇಂದು ಸಂಜೆಯ ವರೆಗೆ ಕಾಯ್ದು ನೋಡಬೇಕಾಗಿದೆ.
***
ಈ ಲೇಖನ ಹಂಚಿಕೊಳ್ಳಿ