ಶಿವಾಜಿ ಕಾಗಣಿಕರ : ಗ್ರಾಮ ಸ್ವರಾಜ್ಯದ ಅಪೂರ್ವ ಸಾಧಕ; ಪರಿಸರ ಹಿತಾಸಕ್ತಿಯೊಂದಿಗಿನ ಅಭಿವೃದ್ಧಿಯ ಹರಿಕಾರ - ಮೇಧಾ ಪಾಟ್ಕರ್ ಬಣ್ಣನೆ
"ಶಿವಾಜಿ ಕಾಗಣಿಕರ ಅವರ ನೆಲ - ಜಲ ಸಂರಕ್ಷಣೆ, ಪರಿಸರ ಹಿತರಕ್ಷಣೆ, ಕಾರ್ಮಿಕರ ಹಿತಾಸಕ್ತಿ, ಸಾಮಾಜಿಕ ದುಶ್ಚಟಗಳ ನಿರ್ಮೂಲನೆ, ಗೋಬರ್ ಗ್ಯಾಸ್ ನಿರ್ಮಾಣ, ಮಹಿಳೆ ಹಾಗೂ ದಲಿತಪರ ಶೋಷಣೆಯ ಪ್ರತಿರೋಧ ಮೊದಲಾದ ವ್ಯಾಪಕವಾದ ಕಾರ್ಯಸಾಧನೆಗಳು ಗ್ರಾಮ ಸ್ವರಾಜ್ಯ ಮಹೋನ್ನತ ಉದ್ದೇಶವನ್ನು ಹೊಂದಿವೆ - ಮೇಧಾ ಪಾಟ್ಕರ್
ಶಿವಾಜಿ ಕಾಗಣಿಕರ : ಗ್ರಾಮ ಸ್ವರಾಜ್ಯದ ಅಪೂರ್ವ ಸಾಧಕ; ಪರಿಸರ ಹಿತಾಸಕ್ತಿಯೊಂದಿಗಿನ ಅಭಿವೃದ್ಧಿಯ ಹರಿಕಾರ - ಮೇಧಾ ಪಾಟ್ಕರ್ ಬಣ್ಣನೆ
ಅಸ್ಮಿತೆ ವರದಿ,ಅ.೦೫: ಖ್ಯಾತ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಬೆಳಗಾವಿಯ ಡಾ. ಶಿವಾಜಿ ಕಾಗಣಿಕರ ಅವರ "ಸರ್ವೋದಯಚಾ ವಾಟಸರೂ" ಮರಾಠಿ ಭಾಷೆಯ ಆತ್ಮಚರಿತ್ರೆ ಹಾಗೂ " ಗುಡ್ಡಗಾಡಿನ ಗಾಂಧಿ" ಕನ್ನಡ ಜೀವನ ಚರಿತ್ರೆ ಕೃತಿಗಳನ್ನು ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಪರಿಸರವಾದಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಭಾನುವಾರ ಗೋಗಟೆ ರಂಗ ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.

ಡಾ. ಶಿವಾಜಿ ಕಾಗಣಿಕರ, ಜಯಂತ ನಾರ್ವೇಕರ, ಸುಭಾಷ್ ಓವುಳಕರ್, ಮಾಲೋಜಿರಾವ್ ಅಸ್ತೇಕರ್, ವಿಕ್ರಮ ಪಾಟೀಲ, ವಿಜಯ ದಿವಾಣ, ನೀಲಾ ಅಪ್ಟೆ, ಇಂದ್ರಜಿತ ಮೋರೆ, ಸವಿತಾ ಪವಾರ ಇತರೆ ಗಣ್ಯರು, ಲೇಖಕರು, ಶಿವಾಜಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಮೇಧಾ ಪಾಟ್ಕರ್, "ಶಿವಾಜಿ ಕಾಗಣಿಕರ ಅವರ ನೆಲ - ಜಲ ಸಂರಕ್ಷಣೆ, ಪರಿಸರ ಹಿತರಕ್ಷಣೆ, ಕಾರ್ಮಿಕರ ಹಿತಾಸಕ್ತಿ, ಸಾಮಾಜಿಕ ದುಶ್ಚಟಗಳ ನಿರ್ಮೂಲನೆ, ಗೋಬರ್ ಗ್ಯಾಸ್ ನಿರ್ಮಾಣ, ಮಹಿಳೆ ಹಾಗೂ ದಲಿತಪರ ಶೋಷಣೆಯ ಪ್ರತಿರೋಧ ಮೊದಲಾದ ವ್ಯಾಪಕವಾದ ಕಾರ್ಯಸಾಧನೆಗಳು ಗ್ರಾಮ ಸ್ವರಾಜ್ಯ ಮಹೋನ್ನತ ಉದ್ದೇಶವನ್ನು ಹೊಂದಿವೆ. ವೈಯಕ್ತಿಕ ಬದುಕನ್ನು ಸಂಪೂರ್ಣ ತ್ಯಾಗಗೊಳಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಜೀವನದ ಉದ್ದಕ್ಕೂ ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ಅತ್ಯಂತ ವಿನಮ್ರ ಭಾವದಿಂದ ಗುರುತರವಾದ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿನಾಶ ನಿರಂತರವಾಗಿ ನಡೆಯುತ್ತಿದೆ. ಪ್ರಾಕೃತಿಕ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಸಾಧ್ಯವಿದೆ ಎಂಬುದಕ್ಕೆ ಶಿವಾಜಿ ಕಾಗಣಿಕರ ಅವರ ಕಾರ್ಯಸಾಧನೆಗಳು ಉತ್ತಮ ನಿದರ್ಶನಗಳಾಗಿವೆ" ಎಂದು ತಿಳಿಸಿದರು.
ಶಿವಾಜಿ ಅವರ ಆತ್ಮಚರಿತ್ರೆ ಅವರ ಜೀವನ ಹಾಗೂ ಕೆಲಸ ಕಾರ್ಯಗಳ ಸಾಧನೆಯ ಪಟ್ಟಿಗೆ ಮಾತ್ರ ಸೀಮಿತವಾಗದೆ, ಆ ಮೂಲಕ ಅವರ ಸಾಮಾಜಿಕ ಬದ್ಧತೆಯ ಜೀವನ ಕ್ರಮ ಹಾಗೂ ಗ್ರಾಮ ಸ್ವರಾಜ್ಯ ಅನುಷ್ಠಾನದ ವೈಚಾರಿಕ ಚಿಂತನ ಕ್ರಮದ ಕ್ರಮಬದ್ಧತೆ ವ್ಯಕ್ತವಾಗಿದೆ. ವಿಶಿಷ್ಟ ಅನುಭವ, ಅಧ್ಯಯನ, ಆಚಾರ, ವಿಚಾರಗಳೊಂದಿಗೆ ಸರಳತೆ ಹಾಗೂ ವಿನಮ್ರ ಭಾವ ಮಡುಗಟ್ಟಿದೆ. ಅವರ ನಿರಂತರ 55 ವರ್ಷಗಳ ಕಾರ್ಯಸಾಧನೆ ಮಾತುಗಳ ವರ್ಣನೆಗೆ ಮೀರಿದಾಗಿದೆ. ಇಂತಹ ಅಪರೂಪದ ವ್ಯಕ್ತಿತ್ವ ನಿರ್ಮಾಣದ ಹಿಂದೆ ತಾಯಿಯ ಮಮಕಾರ, ವಂಚಿತ ಸಮುದಾಯಗಳ ಕಣ್ಣೀರು, ಬಡತನ, ಹಸಿವು, ಹಿಂಸೆ ಶೋಷಣೆ, ಮಹಿಳೆಯರ ವೇದನೆಗಳು ಪಾಠ ಕಲಿಸಿವೆ ಎಂದು ಮೇಧಾ ಪಾಟ್ಕರ್ ವಿವರಿಸಿದರು.
ಶಿವಾಜಿ ಕಾಗಣಿಕರ "ಇದುವರೆಗೆ ಮಾಡಿದ ಕೆಲಸಗಳನ್ನು ಪುಸ್ತಕ ರೂಪದಲ್ಲಿ ನೀಡಿರುವುದು ಸಂತಸ ತಂದಿದೆ. ಮತ್ತೇ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೊಸ ಚೈತನ್ಯ ದೊರೆತಿದೆ. ಕೊನೆ ಉಸಿರುವವರೆಗೂ ಸಮಾಜದ ಕಲ್ಯಾಣಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ" ಎಂದು ತಿಳಿಸಿದರು.
****
ಈ ಲೇಖನ ಹಂಚಿಕೊಳ್ಳಿ