ಮಣ್ಣಿನ ವಾಸನೆಯಿಂದ ಮನಸ್ಸು ಬೆಸೆದ ಶಿವಾಜಿ ಕಾಗಣಿಕರ ; ಆತ್ಮಚರಿತ್ರೆ – ಜೀವನಚರಿತ್ರೆ ಕೃತಿಗಳ ಲೋಕಾಪರ್ಣೆ
ಆತ್ಮಚರಿತ್ರೆ – ಜೀವನಚರಿತ್ರೆ ಕೃತಿಗಳ ಲೋಕಾಪರ್ಣೆ : ಕ್ಯಾಂಪ್ ಪ್ರದೇಶದ ಗೋಗಟೆ ರಂಗಮಂದಿರದಲ್ಲಿ ಜರುಗುವ ಅಪರೂಪದ ಈ ಸಮಾರಂಭದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅನೇಕ ಜನಪರ ಮನಸ್ಸುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ
ಮಣ್ಣಿನ ವಾಸನೆಯಿಂದ ಮನಸ್ಸು ಬೆಸೆದ ಶಿವಾಜಿ ಕಾಗಣಿಕರ
ಆತ್ಮಚರಿತ್ರೆ – ಜೀವನಚರಿತ್ರೆ ಕೃತಿಗಳ ಲೋಕಾಪರ್ಣೆ
ಅಸ್ಮಿತೆ,ಅ.೦೩ : ಮಣ್ಣಿನ ಸುತ್ತ ನೀರು ಹರಿಸಿ ಬೆಳೆಗಳಿಗೆ ಜೀವ ತುಂಬಿದ, ಗ್ರಾಮಗಳ ಸ್ವಾಭಿಮಾನ ಬದುಕಿಗೆ ಇಂಬು ನೀಡಿ, ಕುಡಿತದ ಚಟದಿಂದ ವಿಮುಕ್ತಗೊಳಿಸಿ, ಭ್ರಷ್ಟರ ಹೇಸಿಗೆ ಮನಸ್ಸು ಗುರುತಿಸುವಿಕೆ ಸೇರಿದಂತೆ ಜನಪರ ಕಾಳಜಿ ಮತ್ತು ಕ್ರಿಯಾಶೀಲತೆಯ ಮಣ್ಣಿನ ವಾಸನೆಯಿಂದ ಗಡಿ ಭಾಗದಲ್ಲಿ ಉಭಯ ಭಾಷಿಕರ ಮನಸ್ಸು ಬೆಸೆದ ಅಪರೂಪದ ವ್ಯಕ್ತಿತ್ವ ಶಿವಾಜಿ ಕಾಗಣಿಕರ.

ನಿಸ್ವಾರ್ಥ ಮನೋಧರ್ಮದ ಶಿವಾಜಿ ಚತ್ರಪ್ಪ ಕಾಗಣಿಕರ ಅವರಿಗೆ ೭೫ ವರ್ಷ ದಾಟಿದೆ. ಸರಳ, ಸಾಧಾಸೀದಾ ಜೀವನ ಶೈಲಿ ಹಾಗೂ ಜನಪರ ವಿಚಾರಧಾರೆಯ ಮೂಲಕ ಜೀವನದ ಸಾರ್ಥಕತೆ ಕಂಡ ಶಿವಾಜಿ ಅವರ ಆತ್ಮಚರಿತ್ರೆ “ಸರ್ವೋದಯಾಚ ವತ್ಸರು” ಹಾಗೂ ಅವರ ಕುರಿತಾದ ಕನ್ನಡ ಮತ್ತು ಆಂಗ್ಲ ಭಾಷೆಯ ಜೀವನ ಚರಿತ್ರೆ ಪುಸ್ತಕಗಳು ಭಾನುವಾರ ಸೆಪ್ಟೆಂಬರ್ ೪ರಂದು ಸಂಜೆ ೪ ಗಂಟೆಗೆ ಲೋಕಾರ್ಪಣೆಗೊಳ್ಳುವ ಅಪರೂಪದ ಸಮಾರಂಭ ಜರಗಲಿದೆ.
ಕ್ಯಾಂಪ್ ಪ್ರದೇಶದ ಗೋಗಟೆ ರಂಗಮಂದಿರದಲ್ಲಿ ಜರುಗುವ ಅಪರೂಪದ ಈ ಸಮಾರಂಭದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅನೇಕ ಜನಪರ ಮನಸ್ಸುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಬೆಳಗಾವಿ ಜಿಲ್ಲೆಯ ಕಡೋಲಿ ಗ್ರಾಮದ ಶಿವಾಜಿ ಚತ್ರಪ್ಪ ಕಾಗಣಿಕರ ಜಲಾನಯನ ಅಭಿವೃದ್ಧಿ, ಸಾವಯವ ಕೃಷಿ, ಸುಸ್ಥಿರ ಗ್ರಾಮೀಣ ಉದ್ಯೋಗ ಜಾಗೃತಿ, ಭ್ರಷ್ಟಾಚಾರ ವಿರೋಧಿ ಅಭಿಯಾನ, ಸಾರಾಯಿ ವಿರೋಧಿ ಅಭಿಯಾನ, ಜಲಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಐದು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅನುಪಮ ಸೇವೆ ಕಾರ್ಯದಿಂದಾಗಿ ಕನ್ನಡ – ಮರಾಠಿ ಸಮಾಜದ ಮನಸ್ಸುಗಳನ್ನು ಬೆಸೆಯುವುದರ ಮೂಲಕ ಗಡಿ ಭಾಗದಲ್ಲಿ ಭಾಷಾ ಬಾಂಧವ್ಯದ ಒಂದು ಮಾದರಿಯಾದ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಓದಿದ ಇತಿಹಾಸ ಪಾಠವು ಎಳೆಯ ಶಿವಾಜಿಯವರ ಮೇಲೆ ಎಂಥ ಗಾಢ ಪ್ರಭಾವ ಬೀರಿತೆಂದರೆ ಸರ್ವೋದಯ ಕಾರ್ಯಕರ್ತರಾಗಿ ಗ್ರಾಮಸ್ವರಾಜ್ಯಚಳವಳಿಯಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ಮಾಡಿದರು. ಸಾನೆ ಗುರೂಜಿ ಮತ್ತು ವಿನೋಬಾ ಭಾವೆ ಅವರಿಂದ ಪ್ರಭಾವಿತರಾಗಿ ಯವ್ವನದ ದಿನಗಳಲ್ಲೇ ಮನೆಬಿಟ್ಟು ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟುಕೊಂಡರು. ಜೂನ್ ತಿಂಗಳು ಬಂತೆಂದರೆ ತಾವು ವಾಸಿಸುವ ಸುತ್ತಮುತ್ತಲ ಹತ್ತಾರು ಹಳ್ಳಿಗಳ ತಿರುಗಿ, ಬಡ, ತಳ ಸಮುದಾಯಗಳ ಮಕ್ಕಳನ್ನು ಕರೆತಂದು ಶಾಲೆಗಳಲ್ಲಿ ಸೇರಿಸುತ್ತಿದ್ದರು. ರಾತ್ರಿ ಶಾಲೆಯನ್ನೂ ಆರಂಭಿಸಿದರು. ೨೦೦ ಹಳ್ಳಿಗಳಲ್ಲಿ ೨೭೦ ಬಅಲವಾಡಿಗಳನ್ನು ಆರಂಭಿಸಿದರು. ಮಹಿಳೆಯರು ಉರುವಲಿಗೆ ಪಡುವ ಕಷ್ಟ ನೋಡಿದ್ದ ಶಿವಾಜಿಯವರು, ಕಟ್ಟಣಭಾವಿ ಮತ್ತು ಕಡೋಲಿ ಊರುಗಳ ಆಸುಪಾಸುಗಳಲ್ಲಿ ಗೋಬರ್ ಗ್ಯಾಸ್ ಸ್ಥಾವರಗಳನ್ನು ಮನೆಮನೆಗೆ ಕಟ್ಟಿಕೊಟ್ಟರು. ಜನ ಜಾಗರಣ್ ಸಂಸ್ಥೆಯೊಡನೆ ಕೈಜೋಡಿಸಿ ತಮ್ಮ ಸಾಮಾಜಿಕ ಸೇವೆ ವಿಸ್ತಾರತೆ ಒದಗಿಸಿದರು.
೧೯೮೪ರಲ್ಲಿ ಹಂದಿಗನೂರು ಪ್ರೌಢಶಾಲಾ ಆವರಣದಲ್ಲಿ ಗಿಡನೆಟ್ಟು ಹಸಿರಾಗಿಸುವ ಕಾಯಕ ಆರಂಭಿಸಿದ ಅವರು, ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಿಡನೆಟ್ಟು ಬೆಳೆಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ತಿರುಗಿ ನೆಟ್ಟ ಗಿಡಗಳನ್ನು ಪೋಷಿಸಿದ್ದಾರೆ.
ಹಳ್ಳಿಗಳು ಎದುರಿಸುತ್ತಿದ್ದ ತೀವ್ರ ನೀರಿನ ಕೊರತೆ ಗಮನಿಸಿ ಗಿಡಮರಗಳ ನೆಟ್ಟು, ಇಳಿಜಾರು ಪ್ರದೇಶದಲ್ಲಿ ಹೊಂಡ ಕುಣಿಗಳ ತೆಗೆದು ನೀರಿಂಗುವ ವ್ಯವಸ್ಥೆ ಮಾಡಿದ್ದಾರೆ. ಕಟ್ಟಣಬಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಬಂಬರಗಾ ಊರುಗಳಲ್ಲಿ ಜನರ ಮನವೊಲಿಸಿ ನಿರ್ಮಿಸಿದ ಕೆರೆಗಳು ಇವತ್ತಿಗೂ ಜನರಿಗೆ, ಜಾನುವಾರುಗಳಿಗೆ ನೀರುಣಿಸುತ್ತ ಬರ ಪರಿಸ್ಥಿತಿ ಎದುರಿಸದಂತೆ ತಡೆದಿವೆ.
ಖಾದಿ ಅಂಗಿ, ಚಡ್ಡಿ ಧರಿಸಿ ಸೈಕಲ್ಲಿನಲ್ಲಿ ಹಳ್ಳಿ ಹಳ್ಳಿ ತಿರುಗುವ ಕಾಗಣಿಕರ್ ಮಾಮಾ, ಗ್ರಾಮೀಣ ಬೆಳಗಾವಿ ಭಾಗದಲ್ಲಿ ಯುವ ಸಮುದಾಯಕ್ಕೆ ಸ್ಪೂರ್ತಿ ಮತ್ತು ಮಾದರಿಯಾಗಿದ್ದಾರೆ. ಗಾಂಧೀಜಿಯವರ ತತ್ವಗಳಿಗೆ ನಿಷ್ಠರಾಗಿರುವ ಅವರು, ಸರಳತೆ ಮಿತವ್ಯಯದ ಜೀವನ ನಡೆಸುತ್ತಿದ್ದಾರೆ. ಐದು ದಶಕಗಳಿಂದ ಸಮಾಜಕ್ಕೆ ತೆತತ್ತುಕೊಂಡ ಅವರು ಯುವಪೀಳಿಗೆಗೆ ಆದರ್ಶ ಮಾದರಿಯಾಗಿದ್ದಾರೆ.
ರಾಜ್ಯ ಸರ್ಕಾರ ಇವರಿಗೆ ʼದೇವರಾಜು ಅರಸುʼ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಅವರ ಸಾಮಾಜಿಕ ಸೇವೆಗೆ ಮನಸೋತ ಜಾಗೃತ ಮನಸ್ಸುಗಳನ್ನು ಅವರ ಕೃತಿಗಳನ್ನು ಲೋಕಾರ್ಪಣೆಗೊಳಿಸುವುದರ ಮೂಲಕ ಪ್ರೀತಿಯಿಂದ ಗೌರವಿಸುತ್ತಿರುವುದು ಶ್ಲಾಘನೀಯ. ಭಾಷಾ ರಾಜಕೀಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳುಗೇಡಿಸುವ ಮನಸ್ಸುಗಳಿಗೆ ಶಿವಾಜಿ ಕಾಗಣಿಕರ ಅಭಿವೃದ್ಧಿ ಸಮಾಜ ನಿರ್ಮಾಣಕ್ಕೆ ಅನುಕರಣೀಯರಾಗಿದ್ದಾರೆ. ಅಸ್ಮಿತೆ ಅವರನ್ನು ಪ್ರೀತಿಯಿಂದ ಈ ಮೂಲಕ ಗೌರವಿಸುತ್ತದೆ.
- ಡಾ. ಕೆ.ಎನ್. ದೊಡ್ಡಮನಿ
ಈ ಲೇಖನ ಹಂಚಿಕೊಳ್ಳಿ