ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಅಸ್ಮಿತೆ ವರದಿ, ಸೆ.೦೫: ಬೆಳಗಾವಿಯ ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ (ದ ಮರಾಠಾ ಎಲ್‌ಐಆರ್‌ಸಿ - ಮರಾಠಾ ಲಘು ಪದಾತಿದಳದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಉತ್ಸಾಹ ಹಾಗೂ ಸಾಂಪ್ರದಾಯಿಕ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದ ಮರಾಠಾ ಎಲ್‌ಐಆರ್‌ಸಿ ಕೇಂದ್ರದ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ, ಎಸ್‌ಎಂ, ವಿಎಸ್‌ಎಂ ಹಾಗೂ ಫ್ಯಾಮಿಲಿ ವೆಲ್‌ಫೇರ್ ಆರ್ಗನೈಸೇಶನ್‌ನ ಅಧ್ಯಕ್ಷೆ ವೇದಾ ಉಪಾಧ್ಯಾಯ, ಹಿರಿಯ ಅಧಿಕಾರಿಗಳು, ಜೆಸಿಒಗಳು, ಯೋಧರು ಹಾಗೂ ಅವರ ಕುಟುಂಬ ಸದಸ್ಯರು ಮಿಲಿಟರಿ ಮಹಾದೇವ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವದ ಅಂಗವಾಗಿ ಸಲ್ಲಿಸಲಾದ ನೈವೇದ್ಯದಲ್ಲಿ ಭಾಗವಹಿಸಿದರು.

ಜನ್ಮಾಷ್ಟಮಿ ಸಂಭ್ರಮದ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಅಂತರ್-ಬೆಟಾಲಿಯನ್ ದಹಿ ಹಂಡಿ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿವಿಧ ಬೆಟಾಲಿಯನ್‌ಗಳ ತಂಡಗಳು ಅತ್ಯಂತ ಉತ್ಸಾಹ, ಹುಮ್ಮಸ್ಸು ಹಾಗೂ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿದವು. ತಂಡದ ಸಮನ್ವಯ, ದೃಢಸಂಕಲ್ಪ, ಶಕ್ತಿ ಮತ್ತು ರೆಜಿಮೆಂಟಲ್ ಸೌಹಾರ್ದತೆಯ ಅದ್ಭುತ ಪ್ರದರ್ಶನಕ್ಕೆ ಸ್ಪರ್ಧೆ ಸಾಕ್ಷಿಯಾಯಿತು.

ಈ ಸಂಭ್ರಮವು ಭಕ್ತಿ, ಸಂಪ್ರದಾಯ ಮತ್ತು ರೆಜಿಮೆಂಟಲ್ ಉತ್ಸಾಹದ ಸುಂದರ ಸಂಗಮವನ್ನು ಪ್ರತಿಬಿಂಬಿಸಿತು. ಸೈನಿಕರು ಹಾಗೂ ಅವರ ಕುಟುಂಬಗಳ ನಡುವಿನ ಏಕತೆ, ಸೌಹಾರ್ದತೆ ಮತ್ತು ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಡಗರದಿಂದ ಆಚರಿಸಲಾಯಿತು.
***
ಈ ಲೇಖನ ಹಂಚಿಕೊಳ್ಳಿ