'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ
ಅಸ್ಮಿತೆ ವರದಿ, ಸೆ.೦೩: ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಲು ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರುವ ಮಹತ್ವಾಕಾಂಕ್ಷೆಯೊಂದಿಗೆ ರಚಿಸಲಾದ 'ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಸಂಪುಟ ಉಪಸಮಿತಿ'ಯ ಚೊಚ್ಚಲ ಸಭೆಯು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಜರುಗಿತು.
ಮಹತ್ವದ ಈ ಸಭೆಯಲ್ಲಿ, ಸಮಿತಿಯು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ರೂಪುರೇಷೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ವಿಶೇಷವಾಗಿ, 'ಛಾತ್ರೋಂ ಕಿ ಗೂಂಜ್' (ವಿದ್ಯಾರ್ಥಿಗಳ ಪ್ರತಿಧ್ವನಿ) ಅಭಿಯಾನದ ಮೂಲ ಆಶಯಗಳಿಗೆ ಜೀವತುಂಬುವ ನಿಟ್ಟಿನಲ್ಲಿ ಹಾಗೂ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಸಮಗ್ರ ಬದಲಾವಣೆಗಳ ಕುರಿತು ಗಂಭೀರ ಚಿಂತನೆ ನಡೆಸಲಾಯಿತು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ನಿರ್ಣಾಯಕ ಸಭೆಯಲ್ಲಿ ರಾಜ್ಯದ ಪ್ರಮುಖ ಸಚಿವರಾದ ಯು.ಟಿ. ಖಾದರ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದು ವಿಚಾರಗಳನ್ನು ಹಂಚಿಕೊಂಡರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ .ಕೆ. ಅತೀಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ನಾಳಿನ ಸುಭದ್ರ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಈ ಸಭೆಯು ಒಂದು ಭರವಸೆಯ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಲೇಖನ ಹಂಚಿಕೊಳ್ಳಿ