ಬೆಟಗೇರಿ ಕೃಷ್ಣಶರ್ಮರ ಕೃತಿಗಳು ಸಂಶೋಧನೆಗೆ ಪ್ರಮುಖ ಆಕರಗಳಾಗಿವೆ : ಡಾ. ಮರಿಗುದ್ದಿ
ಅಸ್ಮಿತೆ ವರದಿ, ಅ.೧೧: ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಮೂಲಕ "ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ : ಪುನರಾವಲೋಕನ" ವಿಷಯ ಕುರಿತಾದ ವಿಚಾರ ಸಂಕಿರಣವನ್ನು ಇತ್ತೀಚಿಗೆ (ಅಕ್ಟೋಬರ್ -೦೯) ಕೆ.ಕೆ. ಕೊಪ್ಪದ ಶ್ರೀಮತಿ ಸೋಮವ್ವ ಚ ಅಂಗಡಿ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.

ಹಿರಿಯ ವಿದ್ವಾಂಸ ಡಾ. ಗುರುಪಾದ ಮರಿಗುದ್ದಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, "ಡಾ. ಬೆಟಗೇರಿ ಕೃಷ್ಣಶರ್ಮ ಅವರ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳು ಸಂಶೋಧನೆಗೆ ಪ್ರಮುಕ ಆಕರಗಳಾಗಿವೆ. ಅವರ 'ಕರ್ನಾಟಕ ಜನಜೀವನ' ಕೃತಿ ಕನ್ನಡಿಗರ ಕೋಟೆ ಕಾಳಗ ಮತ್ತು ಕೋಟೆಗಳ ನಿರ್ಮಾಣದ ಪಾರಂಪರಿಕ ಅಭಿಯಾಂತ್ರಿಕ ಜ್ಞಾನದ ಬಗ್ಗೆ ಅಪಾರ ಮಾಹಿತಿಯನ್ನು ಒದಗಿಸುತ್ತದೆ. ಅವರ ಕಾದಂಬರಿಗಳಲ್ಲಿ ವಿಶೇಷವಾದ 'ಕನಕದಾಸರು ಕಂಡ ವಿಜಯನಗರ' ಮಹತ್ವದ ಐತಿಹಾಸಿಕ ಕಾದಂಬರಿಯಾಗಿದ್ದು ಚರಿತ್ರೆ, ವಿಜ್ಞಾನ, ಸಂಸ್ಕೃತಿ, ಆಚರಣೆಗಳ ವಿಭಿನ್ನ ಆಯಾಮಗಳನ್ನು ಒದಗಿಸುತ್ತದೆ. ಬೆಟಗೇರಿ ಕೃಷ್ಣಶರ್ಮ ಅವರು, ನವೋದಯ ಕಾಲಘಟ್ಟದಲ್ಲಿ ವಿವಿಧ ಪ್ರಕಾರದ ಮೌಲಿಕ ಕೃತಿಗಳನ್ನೂ ನೀಡಿದರೂ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ" ಎಂದು ತಿಳಿಸಿದರು.
ಸೌಂದರ್ಯಶಾಸ್ತ್ರದ ಹಂಗು ತೊರೆದವರು:
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, "ಡಾ. ಬೆಟಗೇರಿ ಕೃಷ್ಣಶರ್ಮ ಸರಳ ಬದುಕಿನೊಳಗೆ ದೊಡ್ಡ ವಿಚಾರಗಳನ್ನು ಕಟ್ಟಿಕೊಟ್ಟವರು. ಕನ್ನಡದ ನವೋದಯ ಸಾಹಿತ್ಯದ ಆಶಯ ಪ್ರಕೃತಿ ಪ್ರೇಮವಾಗಿದ್ದ ಸಂದರ್ಭದಲ್ಲಿ ಬೆಟಗೇರಿ ಕೃಷ್ಣಶರ್ಮರು ಬೆಳುವಲದ ನಾಡಿನ ಹಾಗೂ ಈ ನೆಲದ ಮಣ್ಣಿನ ರಾಯಭಾರಿಗಳಾಗಿ ಜನಪದ ಭಾವ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಸೌಂದರ್ಯಶಾಸ್ತ್ರದ ಆಯಾಮದಿಂದ ಹೊರಬಂದು ಸಾಮನ್ಯರ ಬದುಕಿನ ಜೀವನ ಆದರ್ಶ ಮತ್ತು ಸಾಮರಸ್ಯದ ಬದುಕನ್ನು ತಮ್ಮ ನಲ್ವಾಡುಗಳ ಮೂಲಕ ಕಟ್ಟಿಕೊಟ್ಟರು" ಎಂದು ಹೇಳಿದರು.
"ಕಾವ್ಯ ಹುಟ್ಟುವುದು ಅರಮನೆಯಲ್ಲಿ ಅಲ್ಲ ಅದು ಬಿಸುಕಲ್ಲಿನ ರಾಗದಿಂದ ಹುಟ್ಟಿ ಒಲೆಯ ಬೆಂಕಿಯಲ್ಲಿ ಬೆಂದು ಹೊಲದ ಬದುವಿನಲ್ಲಿ ಹಾಡಾಗುತ್ತದೆ.ಜನಪದ ಜನಜೀವನವೇ ಸಾಹಿತ್ಯ ಹಾಗೂ ಜನಪದ ಗರತಿಯರು ಹಾಡಿದ ಹಾಡುಗಳೇ ಸ್ತ್ರೀ ಅಭಿವ್ಯಕ್ತಿಯ ಸಂಕಥನ ಮತ್ತು ಹೆಣ್ಣಿನ ಆತ್ಮಕಥನಗಳೆಂದು ಕೃಷ್ಣಶರ್ಮರು ದಾಖಲಿಸಿರುವುದನ್ನು ಸ್ಮರಿಸಿದರು " ಎಂದರು.
ನವೋದಯ ಕಾವ್ಯ ದೋರಣೆ ಮತ್ತು ಬೆಟಗೇರಿ ಕೃಷ್ಣಶರ್ಮರ ಕಾವ್ಯದ ಕುರಿತಾಗಿ ಡಾ. ಆ ಬ ಇಟಗಿ ಮಾತನಾಡಿ, "ಡಾ. ಬೆಟಗೇರಿ ಕೃಷ್ಣಶರ್ಮರವರು ನವೋದಯ ಕವಿಗಳಾಗಿದ್ದರೂ ಪ್ರಗತಿಶೀಲ ಧೋರಣೆಗಳು ಅವರ ಕತೆಗಳಲ್ಲಿ ವ್ಯಕ್ತವಾಗಿವೆ" ಎಂದರು.
ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟಿನ ಸದಸ್ಯೆ ಡಾ. ಗೀತಾಂಜಲಿ ಕುರುಡಗಿ, "ಡಾ.ಬೆಟಗೇರಿ ಕೃಷ್ಣಶರ್ಮರ ಬದುಕು ಬರಹವನ್ನು ನಾಡಿನಾದ್ಯಂತ ಪ್ರಸರಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಹುಲಮನಿವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಮಧುರಾ ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಮಾರಿ ಜ್ಯೋತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮನೋಹರ ಜಂಗಳಿ ಸ್ವಾಗತಿಸಿದರು. ಮಂಜುನಾಥ ಪಾಟೀಲ ನಿರೂಪಿಸಿದರು. ಬಸವರಾಜು ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೊಧಕ ಬೊಧಕೇತರ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
***
ಈ ಲೇಖನ ಹಂಚಿಕೊಳ್ಳಿ