ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ
ಅಸ್ಮಿತೆ ವರದಿ, ಅ.೩೧: ದಲಿತರು ಆರ್ಥಿಕವಾಗಿ ಸುಧಾರಣೆಗೆ ಹೆಚ್ಚು ಆದ್ಯತೆ ಕೊಡುವುದರ ಮೂಲಕ ಆರ್ಥಿಕ ವಲಯದಲ್ಲಿ ಹೆಚ್ಚು ಬೆಳೆಯಬೇಕು ಎಂದು ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಸ್.ಪಿ. ತಳವಾರ ಹೇಳಿದರು.
ಚಿಕ್ಕೋಡಿಯ ಡಾ.ಬಿ.ಆರ್.ಅಂಬೇಡ್ಕರ್ ವಿವಿದ್ದೋಶ ಸಹಕಾರ ಸಂಘದ ಆಶ್ರಯದಲ್ಲಿ ಇಂದು ಚಿಕ್ಕೋಡಿಯ ಅರವಿಂದ ಘಟ್ಟಿ ಫಾರ್ಮ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮತ್ತು ಯಶಸ್ವಿನಿ ಕಾರ್ಡ್ ವಿತರಣೆ ಸಮಾರಂಭದಲ್ಲಿ ಅವರು ಅಭಿನಂದನ ನುಡಿಗಳನ್ನಾಡಿದರು.
"ಆರ್ಥಿಕವಾಗಿ ಸಬಲರಾದರೆ ರಾಜಕೀಯ ಅಧಿಕಾರಕ್ಕೆ ಎಡೆ ಮಾಡುತ್ತದೆ. ರಾಜಕೀಯ ಅಧಿಕಾರದಿಂದ ಎಲ್ಲ ಬಾಗಿಲು ತೆರೆದುಕೊಳ್ಳುತ್ತೇವೆ. ಜೀವನ ಮಟ್ಟವೂ ಸುಧಾರಿಸುತ್ತದೆ" ಎಂದು ತಿಳಿಸಿದ ಪ್ರೊ. ಎಸ್.ಪಿ. ತಳವಾರ, "ಸರ್ಕಾರಿ ಉದ್ಯೋಗ ಪಡೆದ ಅನುಕೂಲಸ್ಥರು ತಮ್ಮ ಸಮುದಾಯದ ಹಿತಾಸಕ್ತಿಗೆ ಸ್ಪಂದಿಸದೇ ಇರುವುದು ವಿಷಾದನೀಯ ಬೆಳವಣಿಗೆ. ನೆರವಾಗದಿರುವುದು ವಿಷಾದನೀಯ. ಅಂಥವರು ತಮ್ಮ ಕುಟುಂಬದ ಹಿತಾಸಕ್ತಿಗೆ ಮಾತ್ರ ಸೀಮಿತಗೊಳ್ಳದೆ ಸಮುದಾಯದ ನೋವಿಗೆ ಸ್ಪಂದಿಸುವ ಮಾನವೀಯತೆ ಉಳಿಸಿಕೊಳ್ಳಬೇಕು" ಎಂದು ತಿಳಿಸಿದರು.

"ಮೀಸಲಾತಿ ಬೇಕು ಬೇಡ ಎಂಬ ಅವಾಸ್ತವಿಕವಾದ ಚರ್ಚೆ ನಡೆಯುತ್ತಿದೆ. ತಲೆತಲಾಂತರದಿಂದ ಅಮಾನವೀಯವಾಗಿ ಶೋಷಣೆಗೊಳಗಾದವರಿಗೆ ನೀಡಲಾದ ಸಂವಿಧಾನ ಬದ್ಧವಾದ ಹಕ್ಕು. ಸಮ ಸಮಾಜ ನಿರ್ಮಾಣವಾಗುವ ತನಕ ಮೀಸಲಾತಿ ಮುಂದುವರೆಯಬೇಕಾಗುತ್ತದೆ" ಎಂದು ಪ್ರೊ. ತಳವಾರ ತಿಳಿಸಿದರು.
ನಿವೃತ್ತ ಶಿಕ್ಷಕ ಡಿ.ಎಸ್. ಕುಲಕರ್ಣಿ, " ದಲಿತರು ಗುಲಾಮಗಿರಿಗೆ ಅರ್ಪಿಸಿಕೊಳ್ಳದೆ, ಸ್ವಾಭಿಮಾನದ ಬದುಕು ಕಟ್ಡಿಕೊಳ್ಳಲು ಮುಂದಾಗಬೇಕು" ಎಂದು ಹೇಳಿದರು.
ಉದ್ಯಮಿ ಅರವಿಂದ್ ಘಟ್ಟಿ, ಎವಿಎಸ್‌ಎಸ್ ಚಿಕ್ಕೋಡಿ ಶಾಖೆಗೆ ೫೦೦ ಸದಸ್ಯರನ್ನು ನೀಡುವುದಾಗಿ ಹೇಳಿದರು. ಎವಿಎಸ್‌ಎಸ್ ಸಂಸ್ಥಾಪಕ ತುಂಬಲ ರಾಮಣ್ಣ,
"ಎವಿಎಸ್‌ಎಸ್ ಆರಂಭಿಸಿ ೧೪ ವರ್ಷಗಳಾಗಿದೆ. ೨೫ನೇ ವರ್ಷಾಚರಣೆಗೆ ಎವಿಎಸ್‌ಎಸ್ ಬ್ಯಾಂಕ್ ಆರಂಭಿಸುವ ಗುರಿ ಹೊಂದಿದ್ದೇವೆ.. ಐಎಎಸ್ ಕೋಚಿಂಗ್, ಸೂಪರ್ ಮಾರ್ಕೇಟ್, ಕಾನೂನು ಕಾಲೇಜು ಆರಂಭಿಸಲಾಗುವುದು" ಎಂದು ಹೇಳಿದರು.
ಹಾಸನದ ವಿಜಯಕುಮಾರ ಬಾಗಿವಾಳು, ಯೋಗೀಶ್ ಈ, ಚಾಮರಾಜನಗರದ ಡಾ.ಚಿಂ.ಬ.ಬಸವರಾಜು, ತಿ.ನರಸೀಪುರದ ನಾಗರಾಜು ತಲಕಾಡು, ಮಂಡ್ಯದ ಆತ್ಮನಂದಾ ಎನ್.ಆರ್, ಮೈಸೂರಿನ ಡಾ.ಮಂಜು ಎಚ್.ಪಿ, ವಿನೋದ್ ಮಹದೇವಪುರ, ಕೋಲಾರದ ಡಾ.ಭೈರಪ್ಪ ಕೆ.ಎಂ, ಯಾದಗಿರಿ ನೀಲಾ ಮಲ್ಲೆ, ಮದ್ದೂರಿನ ಡಾ.ಹೊಂಬಯ್ಯ, ರಾಮನಗರದ ಪ್ರಸನ್ನ, ದಾವಣಗೆರೆಯ ಡಾ.ರಂಗಸ್ವಾಮಿ, ತುಮಕೂರಿನ ಡಾ.ಕುಮಾರಸ್ವಾಮಿ ಬಿಜ್ಜಿಹಳ್ಳಿ ಸೇರಿ ೨೫ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ.ಚಿಂ.ಬ.ಬಸವರಾಜು ಮಾತನಾಡಿದರು. ಕಮಲರತ್ನ ಭಂತೇಜಿ ಸಾನಿಧ್ಯ ವಹಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ನಾಗರಾಜು ಕರನಿಂಗ್, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಂಬಳೆ, ದಲಿತ ಉದ್ಯಮಿ ಮಹೇಂದ್ರ ಸಾಳ್ವೆ, ದಿಲೀಪ್ ಕಾಂಬಳೆ, ಸದಸ್ಯರಾದ ದಯಾನಂದ ಕಾಂಬಳೆ, ದೇವಋಷಿ, ಗುಂಡ್ಲುಪೇಟೆ ಗೋವಿಂದರಾಜು, ಮೈಸೂರಿನ ಜಯರಾಮು ಮುಂತಾದವರು ಉಪಸ್ಥಿತರಿದ್ದರು.
ಡಾ.ಹೊಂಬಯ್ಯ ಪ್ರಾಸ್ತಾವಿಕ ಮಾತನಾಡಿದರು. ಎ.ಜೆ.ಕಾಂಬಳೆ ಅಂಬೇಡ್ಕರ್ ಗೀತೆ ಹಾಡಿದರು.
**
ಈ ಲೇಖನ ಹಂಚಿಕೊಳ್ಳಿ