ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು : ಪ್ರೊ. ಬಿ.ಎ. ಪಾಟೀಲ
ಅಸ್ಮಿತೆ ವರದಿ, ಅ.೨೯: "ಇಂದು ಉದ್ಯೋಗಾವಕಾಶಕ್ಕೆ ವಿಭಿನ್ನ ಕೌಶಲ್ಯ ಹೆಚ್ಚು ಅಗತ್ಯವಾಗಿದ್ದು, ಶಿಕ್ಷಣ ಬೌದ್ಧಿಕ ಬೆಳವಣಿಗೆಯ ಜೊತೆಗೆ ಯುವಕರು ಸ್ವತಃ ಕೌಶಲ್ಯ ಜಾಣ್ಮೆ ರೂಢಿಸಿಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕು. ಕೃಷಿ ಅವಲಂಭಿತ ಉದ್ಯೋಗಕ್ಕೆ ಕೊರತೆಯಿಲ್ಲ. ಕಡಿಮೆ ಸಂಬಳದಲ್ಲಿ ನರಳಿ ಕೆಲಸ ಮಾಡುವುದಕ್ಕಿಂತ ಜಮೀನು ಇದ್ದವರು ಆಧುನಿಕ ಕೃಷಿ ಪದ್ಧತಿಯ ತಿಳುವಳಿಕೆಯೊಂದಿಗೆ ಸ್ವಾಭಿಮಾನ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು" ಎಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ. ಬಿ. ಎ. ಪಾಟೀಲ ತಿಳಿಸಿದ್ದಾರೆ.
ಗಡಿಭಾಗದ ಬೆಳಗಾವಿ ಜಿಲ್ಲೆಯ ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಐಕ್ಯೂ ಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಗುಣಮಟ್ಟದ ಪಠ್ಯದ ಜೊತೆಗೆ ಶೈಕ್ಷಣಿಕ ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸಲು ಪ್ರಮುಖ ಕಾರಣವಾಗುತ್ತವೆ. ಇವೆರಡನ್ನೂ ವಿದ್ಯಾರ್ಥಿಗಳು ಸರಿದೂಗಿಸಿಕೊಳ್ಳುವುದು ಅವಶ್ಯವೆಂದು" ಸಲಹೆ ನೀಡಿದರು.

ಸಂಸ್ಥೆಯ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಪ್ರೊ. ವಿ.ಎಸ್. ತುಗಶೆಟ್ಟಿ ಅವರು,"ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವುದನ್ನು ರೂಢಿಸಿಕೊಂಡು ಆರೋಗ್ಯಕರ ನಾಯಕತ್ವ ಸ್ವಭಾವಗಳನ್ನು ಕರಗತಗೊಳಿಸಬೇಕು. ಸಾಮೂಹಿಕ ತಿಳುವಳಿಕೆ ಹಾಗೂ ಸಕಾರಾತ್ಮಕ ನಿಲುವುಗಳೊಂದಿಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಬದುಕಿಗೊಂದು ಅರ್ಥ ಕಲ್ಪಿಸಿಕೊಳ್ಳಬೇಕು. ಕಾಲೇಜು ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಇವೆಲ್ಲಕ್ಕೂ ಗಟ್ಟಿಯಾದ ಆಧಾರ ಒದಗಿಸುತ್ತವೆ" ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಳಗಾವಿ ಜೈನ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ಎನ್. ದೊಡ್ಡಮನಿ, "ಆಧುನಿಕ ಜೀವನ ಶೈಲಿಯನ್ನು ವ್ಯಾಪಾರೀಕರಣದ ಮುಕ್ತ ಮಾರುಕಟ್ಟೆಯ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕ ವಿವೇಚನೆ ಹಾಗೂ ಭಾವನೆಗಳು ಕಚ್ಚಾ ಸರಕುಗಳಾಗಿ ಪರಿವರ್ತಿತಗೊಂಡಿವೆ. ಯುವ ಸಮುದಾಯ ವಿವೇಚನೆ ಮತ್ತು ಹೃದಯವಂತಿಕೆ ಕಳೆದುಕೊಂಡು ದಾಸ್ಯತ್ವಕ್ಕೆ ಒಳಗಾಗಿ ಗುಲಾಮಗಿರಿ ಜೀವನಕ್ಕೆ ಒಡ್ಡಿಕೊಳ್ಳದೆ, ವೈಚಾರಿಕತೆ, ವಿನಿತ್ವ, ಕಾಯಕದೊಂದಿಗೆ ಆತ್ಮವಿಶ್ವಾಸದೊಂದಿಗೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನೆಲದ ಸಾಂಸ್ಕೃತಿಕ ಪ್ರಜ್ಞೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಗೌರವಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶೈಕ್ಷಣಿಕ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಈ ಬಗೆಯ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಎರಡರಲ್ಲೂ ಸಕ್ರಿಯತೆ ರೂಢಿಸಿಕೊಳ್ಳಬೇಕೆಂದು" ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ಅವರು, " ನಾಯಕತ್ವವೆಂದರೆ ಕೇವಲ ಅಧಿಕಾರ ಅಥವಾ ಸ್ಥಾನಮಾನದ ಗೌರವಕ್ಕೆ ಸೀಮಿತವಾಗಿಲ್ಲ. ಅದು ಸಮಾಜದ ಪ್ರಗತಿಗೆ ದಾರಿದೀಪವಾಗುವ ಜವಾಬ್ದಾರಿಯಾಗಿದೆ ಎಂಬ ಅರಿವು ಸದಾ ಜಾಗೃತವಾಗಿರಬೇಕಾಗುತ್ತದೆ. ಭಾವಿ ಜೀವನದಲ್ಲಿ ಇದೊಂದು ಸಹಜಕ್ರಿಯಾಗಿ ರೂಪಗೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಿಂದಲೇ ತನ್ನ ವೈಯಕ್ತಿಕ ಬೆಳವಣಿಗೆಯ ಪ್ರಾಮುಖ್ಯತೆಯ ಜೊತೆ ಸಮಾಜದ ಏಳಿಗೆಯ ಪಾಲದಾರಿಕೆಯನ್ನು ರೂಢಿಸಿಕೊಳ್ಳುವುದು ಅಗತ್ಯ" ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2024 25ರ ಶೈಕ್ಷಣಿಕ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ 'ಜ್ಞಾನಜ್ಯೋತಿ'ಯನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ವಿವಿಧ ಕಾರ್ಯ ಚಟುವಟಿಕೆಗಳ ಸಂಘಟನೆಗಳ ಕಾರ್ಯದರ್ಶಿಗಳಿಗೆ ಗೌರವಿಸಲಾಯಿತು.
ವೇದಿಕೆ ಮೇಲೆ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಜೆ. ಕೆ. ಪಾಟೀಲ, ಆದರ್ಶ ವಿದ್ಯಾರ್ಥಿ ಶುಭಂ ಬೋರಗಾಂವೆ ಮತ್ತು ಆದರ್ಶ ವಿದ್ಯಾರ್ಥಿನಿ ಸಮೀಕ್ಷಾ ಸಲಗರೆ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಸಮಸ್ತ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜು ಒಕ್ಕೂಟ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯಧ್ಯಕ್ಷ ಡಾ. ಆರ್ ಎಸ್. ಕಲ್ಲೊಳಿಕರ ಪ್ರಾಸ್ತಾವಿಕ ಮಾತನಾಡಿದರು.ಡಾ.ಎ.ಎಮ್ ಜಕ್ಕಣ್ಣವರ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಅನನ್ಯ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ವಿ. ಬಿ. ಮತ್ತು ಪ್ರೊ. ಎಸ್. ಎಸ್. ಫಡತರೆ ನಿರೂಪಿಸಿದರು. ಐಕ್ಯೂ ಎಸಿ ಸಂಯೋಜಕರಾದ ಪ್ರೊ. ಬಿ. ಡಿ. ಧಾಮಣ್ಣವರ ವಂದಿಸಿದರು.
***
ಈ ಲೇಖನ ಹಂಚಿಕೊಳ್ಳಿ