ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ ಸಂಘಟಿತ ಹೋರಾಟ
ಅಸ್ಮತೆ ವರದಿ, ಅ.೩೦: ನೇಕಾರಿಕೆಯ ಕೂಲಿ ಉದ್ಯೋಗವನ್ನೇ ನಂಬಿ ಜೀವಿಸುತ್ತಿರುವ ಅಸಂಘಟಿತ ವಲಯದ ನೇಕಾರ ಕಾರ್ಮಿಕರು ತಮ್ಮ ಗೌರವಯುತ ಬದುಕಿನ ಹಕ್ಕು ಸ್ಥಾಪಿಸಿಕೊಳ್ಳಲು ಜಾಗೃತಗೊಂಡು ಸರ್ಕಾರ ಇತರ ಕಾರ್ಮಿಕ ಕಲ್ಯಾಣ ಮಂಡಳಿಯಂತೆ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸಲು ಒತ್ತಾಯಿಸಿ ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ.
ರವಿವಾರ ಸಂಜೆ ವಡಗಾವಿಯ ಸಾಯಿ ನಗರ ನೇಕಾರ ಕಾಲನಿಯಲ್ಲಿ ಪ್ರಮುಖ ಕೂಲಿ ನೇಕಾರ ಕಾರ್ಮಿಕರು ಸಭೆ ಸೇರಿ, ಸರ್ಕಾರ ತಮ್ಮ ಗೌರವಯುತ ಬದುಕಿಗೆ ದೊರೆಯಬೇಕಾದ ಅವಕಾಶಗಳನ್ನು ಕಲ್ಪಿಸುವಂತೆ ಆಗ್ರಹಿಸಲು ಚರ್ಚಿಸಲಾಯಿತು.

ನೂತನ ಸಂಘಟನೆಯ ನೋಂದಣಿ ಮೂಲಕ ಮತ್ತೊಮ್ಮೆ ಜಿಲ್ಲಾ ಆಡಳಿತಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು. ಕನಿಷ್ಠ ವೇತನ, ದುಡಿಮೆಯ ಸಮಯ ನಿಗದಿ, ಆರೋಗ್ಯ ವಿಮೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಕಾರ್ಮಿಕ ಇಲಾಖೆಯ ಕಾರ್ಡ್ ವಿತರಣೆ, ನೇಕಾರ ಮಾಲಿಕರಿಂದ ಕಿರುಕುಳ ಮುಕ್ತಿ ಮೊದಲಾದ ಬೇಡಿಕೆಗಳನ್ನು ಜಿಲ್ಲಾ ಆಡಳಿತ ಹಾಗೂ ಸರ್ಕಾರದ ಎದುರು ಇಡಲು ಸಭೆಯಲ್ಲಿ ಸಮಾಲೋಚಿಸಲಾಯಿತು.
ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ :
ನೇಕಾರಿಕೆಯ ದುಡಿಯುವ ವರ್ಗದ ಕೆಲ ಮುಖಂಡರು ಸೇರಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರಿಗೆ ಇತ್ತೀಚೆಗೆ ಕೆಲ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿದರು. ಆ ಮನವಿ ಪ್ರಕಾರ, ಸಾಲದ ಹೊರೆಯಿಂದಾಗಿ ಅಗಷ್ಟ 16, 2026ರಂದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ ವಿಠ್ಠಲ ಲೋಖರೆ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಒದಗಿಸಬೇಕು. ಆತನ ಪತ್ನಿಗೆ ಸೂಕ್ತ ಉದ್ಯೋಗ ಒದಗಿಸಬೇಕು. ಮೃತನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಹಾಗೂ ಸಾಲ ಮನ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದರ ಜೊತೆಗೆ ಕೂಲಿ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸರಳ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲದ ಸೌಲಭ್ಯದ ಅನುಕೂಲ ಒದಗಿಸಬೇಕು. ಸಾಲ ಮನ್ನಾ ಸೌಲಭ್ಯವನ್ನು ಸಾಮಾನ್ಯ ಬೇಡಿಕೆಯನ್ನಾಗಿ ಪರಿಗಣಿಸಬೇಕು. ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಬೇಕು. ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಶೀಘ್ರವಾಗಿ ರಚಿಸಬೇಕು. ಕಳೆದ ಹತ್ತು ವರ್ಷಗಳಿಂದ ಮಜೂರಿ ಹೆಚ್ಚಳವಾಗದ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು ಜಿಲ್ಲಾ ಆಡಳಿತ ಮಧ್ಯ ಪ್ರವೇಶಿಸಿ ಮಜೂರಿ ಹೆಚ್ಚಿಸಬೇಕು ಮತ್ತು ಪ್ರತಿವರ್ಷ ಮಜೂರಿ ಪರಿಷ್ಕರಣೆ ನಡೆಯಬೇಕು ಎಂದು ಬೇಡಿಕೆಗಳಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿಯ ಮೊದಲ ಸುತ್ತಿನ ಸಭೆ :
ಕೂಲಿ ನೇಕಾರ ಕಾರ್ಮಿಕರ ಮನವಿಗೆ ಕೂಡಲೇ ಪ್ರತಿಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಕಾರ್ಮಿಕ ಮತ್ತು ಜವಳಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರೊಂದಿಗೆ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದ್ದು, ಕಾರ್ಮಿಕ ಇಲಾಖೆಯಿಂದ ನೀಡಬೇಕಾದ ಕಾರ್ಮಿಕ ಕಾರ್ಡ್‌ಗಳ ಹಂಚಿಕೆಗೆ ಇಲಾಖೆಯ ಅಧಿಕಾರಿಗೆ ಸೂಚಿಸಿದ್ದಾರೆ. ಸಪ್ಟಂಬರ್ ತಿಂಗಳಿನಲ್ಲಿ ಮೊತ್ತೊಮ್ಮೆ ಸಮಾಲೋಚಿಸಿ ಇತರೆ ಬೇಡಿಕೆಗಳ ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಇನ್ನಷ್ಟು ಬೇಡಿಕೆಗಳ ಸೇರ್ಪಡೆ :
ಜಿಲ್ಲಾಧಿಕಾರಿ ಅವರು ಮತ್ತೊಂದು ಸಭೆಗೆ ಆಹ್ವಾನದ ಮುನ್ನ ಇಂದು ಸಭೆ ನಡೆಸಿದ ನೇಕಾರ ಕಾರ್ಮಿಕರು, ಬೆಂಗಳೂರು ಮಾದರಿಯ ವೇತನ ನೀಡಬೇಕು. ಇಎಸ್‌ಐ, ಪಿಎಫ್ ಜಾರಿಗೊಳಿಸಬೇಕು. ಎಂಟುಗಟೆ ದುಡಿಮೆಯ ಸಮಯ ನಿಗದಿಗೊಳಿಸಬೇಕು. ಮಗ್ಗ ನೀಡುವ ನೆಪದಲ್ಲಿ ಸಾಲದ ನೆರವು ನೀಡುವ ನೇಕಾರ ಮಾಲಿಕರ ಕಿರುಕುಳ ಕೊನೆಗಾನಿಸಬೇಕು. ಕಾರ್ಮಿಕರನ್ನು ಜೀತದಾಳದಂತೆ ದುಡಿಸಿಕೊಳ್ಳುವ ಪ್ರವೃತ್ತಿಯಿಂದ ಮುಕ್ತಗೊಳಿಸಬೇಕು. ಎಲ್ಲರಿಗೂ ಕಾರ್ಮಿಕ ಇಲಾಖೆಯ ಕಾರ್ಡಗಳು ದೊರೆಯುವಂತಾಗಬೇಕು. ಆರೋಗ್ಯವಿಮೆ ಸೌಲಭ್ಯ ದೊರೆಯಬೇಕು ಸೇರಿದಂತೆ ಇತರೆ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿದ್ದು, ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು ಎಂದು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಉಪಸ್ಥಿತಿ:
ಇಂದು ವಡಗಾವಯ ಸಾಯಿ ನಗರದ ನೇಕಾರ ಕಾಲನಿಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಮುಖಂಡರಾದ ರವಿ ಪಾಟೀಲ, ಸಾಗರ ಸಾತಪುತೆ, ಯಾಶೀನ್ ಮಕಾನದಾರ, ಈಸೂಫ್ ಪಠಾಣ, ವಿಠ್ಠಲ ಬಂಗೋಡಿ, ಚೇತನ ಕವಡಿ, ಬಸವರಾಜ್ ಮಕಾಟೆ, ಅಬ್ದುಲ್ ಈರ್ಫಾನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
***
ಈ ಲೇಖನ ಹಂಚಿಕೊಳ್ಳಿ