ಬೆಂದ ಒಡಲುರಿಗೆ ಬೆಳಕಾಗುವ ʼಪಲ್ಲವಿ ತವಕʼ
ನೆಲದ ಹಾಡು ಬರೆಯಲು ಹೊರಟ ರಾಯಬಾಗ ಮಣ್ಣಿನ ಸಂವೇದನಾಶೀಲ ಕವಯತ್ರಿ ಕು. ಪಲ್ಲವಿ ಕುಮಾರ ಕಾಂಬಳೆ ಇದೇ 13 ರಿಂದ 17ರವರೆಗೆ ನಡೆಯಲಿರುವ ಮೈಸೂರೂ ದಸರಾ ಉತ್ಸವದ ನಿಮಿತ್ಯ ಆಯೋಜಿತ ರಾಜ್ಯಮಟ್ಟದ ದಸರಾ ಚಿಗುರು ಕವಿಗೋಷ್ಠಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ಕವಯತ್ರಿಯ ಸಂವೇದನೆ ಕಿರು ಒಳನೋಟದೊಂದಿಗೆ ಅಸ್ಮಿತೆಯ ಅಕ್ಷರದ ಅಭಿನಂದನೆಗಳು
ಅಸ್ಮಿತೆ ವರದಿ,ಅ.೧೨: ರಾಯಬಾಗ ಒಣಮಡ್ಡಿ. ಆದರೆ, ಇಲ್ಲಿಯ ವೈಚಾರಿಕತೆಯ ಮಣ್ಣಿನ ಸೊಗಡಿನಲ್ಲಿ ನೆಲದ ಗೀತೆ ಬರೆದು ಹಾಡುವ ಪಲ್ಲವಿಗಳು ಉದಯಿಸುತ್ತಲೇ ಇರುತ್ತವೆ. ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆಯಾದ ಪಲ್ಲವಿ ಕಾಂಬಳೆ ಚಿಗುರಿನಲ್ಲಿ ಮಡ್ಡಿ ನೆಲದ ವಾಸನೆ ಇರಬಹುದು ಎಂದು ನಿರೀಕ್ಷಿಸಿದಾಗ ಅದು ಹುಸಿಯಾಗಲಿಲ್ಲ. ಅವರ ಕವಿತೆಯೊಂದರ ಸಾಲುಗಳನ್ನು ಗಮನಿಸಬಹುದು.
“ಗಾಂಧಿ ಕಂಡ ರಾಮರಾಜ್ಯದಲ್ಲಿ
ಹಾಡುಹಗಲೆ ನಡುಬೀದಿಯಲ್ಲಿ ನಾರಿ
ಬೆತ್ತಲಾದಳಲ್ಲಾ
ಮಾನ-ಪ್ರಾಣಕ್ಕೂ ರಕ್ಷೆಯಿರದಂತಾಯ್ತಲ್ಲ
ಪ್ರಚಾರಪ್ರೀಯರ ಶೋಕಿಗೆ ಬಡವನ ಬದುಕು
ಉಸಿರಿರದ ಬೆದರುಬೊಂಬೆಯಂತಾಯ್ತಲ್ಲ
ನರಿಬುದ್ಧಿ ಶೋಷಕ ರಾಜಕೀಯ ಹಸಿವು
ನಿಗಿಸಲಿಲ್ಲ
ನನ್ನವರ ಜೋಪಡಿಗಳು ಮಹಲುಗಳಾಗಲಿಲ್ಲ"
ಇದು ವರ್ತಮಾನದ ಬೆತ್ತಲು ಜಗತ್ತಿನಲ್ಲಿ ಗುಡಿಸಲುಗಳ ನರಳಿಯ ವೇದನೆಯನ್ನು ಪಲ್ಲವಿ ಕಾಂಬಳೆ ಕಟ್ಟಿಕೊಟ್ಟ ಕಾವ್ಯದ ಕಾವಿನ ಸಾಲುಗಳು. ಗುಡಿಸಿಲಿನಿಂದ ಬಂಗಲೆ ನೋಡುವಿಕೆ, ಬಂಗಲೆಯೊಳಗಿನ ನಗ್ನತೆ ಕಾಣುವ ಕವಯತ್ರಿ ವಿಶಿಷ್ಟ ಸಂವೇದನೆ ಎಳೆವೆಯಲ್ಲಿಯೇ ವಿಶಿಷ್ಟ ಧ್ವನಿ ಪಡೆದುಕೊಂಡಿರುವುದು ಪಲ್ಲವಿಯ ಸಾಮಾಜಿಕ ನೈಜ ಸಂವೇದನೆಗೆ ಸಾಕ್ಷಿ.

ಈ ನೆಲದಲ್ಲಿ ದಲಿತರಂತೆ ಮಹಿಳೆಯೂ ದಯನಿಯ ಸ್ಥಿತಿಯಲ್ಲಿ ಶೋಷಣೆಗೆ ಒಳಗಾಗಿರುವುದು ಇಲ್ಲಿಯ ಕಪ್ಪು ಚರಿತ್ರೆ. ಮಹಿಳೆಯನ್ನು ಕಟ್ಟಿಹಾಕುವುದರ ಮೂಲಕ ಸಾಮಾಜಿಕ ಶ್ರೇ ಣಿಕೃತ ವ್ಯವಸ್ಥೆ ಕಾಯ್ದುಕೊಳ್ಳುತ್ತ ಬರಲಾಗಿದೆ. ಜಾತಿ ವ್ಯವಸ್ಥೆ ಗಟ್ಟಿತನಕ್ಕೆ ಇಡೀ ಮಹಿಳಾ ಕುಲವನ್ನೇ ಬಲಿ ನೀಡುವ ಕಾಯಕ ಇನ್ನೂ ನಿಂತಿಲ್ಲ. ದಲಿತ ಸಮಾಜದ ಮಹಿಳೆ ಏಕಕಾಲಕ್ಕೆ ಮಹಿಳೆ ಶೋಷಣೆ ಹಾಗೂ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಗುರಿಯಾಗುತ್ತಾಳೆ. ಆಧುನಿಕ ಜಗತ್ತಿನಲ್ಲಿ ಇದನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಲಾಗುತ್ತಿದೆ. ಚರಿತ್ರೆ ಮತ್ತು ಸಮಕಾಲೀನ ಶೋಷಣೆಯ ಮಗ್ಗಲುಗಳನ್ನು ಅರಿತಿರುವ ಪಲ್ಲವಿ ಏಕಕಾಲಕ್ಕ ಒಬ್ಬ ಮಹಿಳೆಯಾಗಿ, ಶ್ರೇಣಿಕೃತ ವ್ಯವಸ್ಥೆಯಲ್ಲಿ ತಳ್ಳಲ್ಪಟ್ಟ ಸ್ತ್ರೀಯಾಗಿ ಅನುಭವಿಸುವ ನೋವುಗಳಿಗೆ ಅಕ್ಷರ ರೂಪಗಳನ್ನು ನೀಡುತ್ತಾರೆ. ಮಹಿಳಾ ವಾದದ ವೈಯಕ್ತಿಕ ನಿಲುವಿಗೆ ಮಾತ್ರ ಕಟ್ಟಿಹಾಕಿಕೊಳ್ಳದೆ ಶೋಷಿತ ಇಡೀ ಸಮುದಾಯದ ಪ್ರತಿನಿಧಿಯಾಗುತ್ತಾರೆ. ಇದರಿಂದಾಗಿ ಪಲ್ಲವಿಯ ವಿಚಾರಧಾರೆ ಭಿನ್ನವಾಗುತ್ತದೆ.
ಪಲ್ಲವಿ ಕುಮಾರ ಕಾಂಬಳೆ ಮೂಲತಃ ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದ ಅಪ್ಪಟ ಪ್ರತಿಭೆ. ಬಿಬಿಎ ಪದವಿಧರೆ. ಈಗಾಗಲೇ ಸಂವೇದನಾಶೀಲ ʼನನ್ನವರ ಒಡಲುರಿʼ ಎಂಬ ಕವನ ಸಂಕಲ ಪ್ರಕಟಿಸಿದ್ದು, ʼಕತ್ತಲಿನಿಂದ ಬೆಳಕಿನೆಡೆಗೆʼ ಎಂಬ ಇನ್ನೊಂದು ಸಂಕಲ ಪ್ರಕಟಣೆಯ ಹಂತದಲ್ಲಿದೆ. ʼನನ್ನವರ ಒಡಲುರಿಗೆʼ ರಾಜ್ಯದ ಕನ್ನಡ ಪುಸ್ತಕ ಪ್ರಾಧಿಕಾರ 2021ನೇ ಸಾಲಿನ ಯುವ ಬರಹಗಾರರಿಗೆ ಕೊಡಮಾಡುವ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿ 2024ರಲ್ಲಿ ಪ್ರಕಟಗೊಂಡಿರುವುದು ಅವರ ಕಾವ್ಯಾಸಕ್ತಿಗೆ ನಿದರ್ಶನವಾಗಿದೆ.
ಮೈಸೂರು ದಸರಾ ಕವಿಗೋಷ್ಠಿಗೆ ತೆರಳು ಮೊದಲು ತನ್ನ ಕಾವ್ಯ ಶಕ್ತಿಯಿಂದ ವಿಶೇಷ ಗಮನ ಸೆಳೆದಿರುವ ಪಲ್ಲವಿಗೆ ʼಕರ್ನಾಟಕ ಸರ್ವೋದಯ ಸೌಹಾರದ ವೇದಿಕೆ ಪುರಸ್ಕಾರ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ʼಅಮೃತ್ ರತ್ನʼದಂತಹ ಪ್ರಶಸ್ತಿಗಳು ಸಂದು ಪ್ರೋತ್ಸಾಹಿಸಿವೆ. ಜಿಲ್ಲೆ, ರಾಜ್ಯ ಮಟ್ಟದ ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿರುವ ಅವರು ಪ್ರಸ್ತುತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ ವಿಶೇಷ ಗೌರವ.
ವಾಸ್ತವ ನೈಜತೆಯ ಅರಿವು ಹೊಂದಿರುವ ಪಲ್ಲವಿ ಕಾಂಬಳೆ ಅವರಿಗೆ ವೈಚಾರಿಕೆ ಓದು ಮತ್ತು ತಾತ್ವಿಕತೆಯ ಸೂಕ್ತ ಅರಿವು ಮತ್ತು ಮಾರ್ಗದರ್ಶನ ಸಿಕ್ಕಿದ್ದಾದರೆ ಅವರ ಕಾವ್ಯಕ್ಕೆ ಹೊಸ ಶಕ್ತಿ ಲಭಿಸುತ್ತದೆ. ಸ್ವತಃ ಕವತ್ರಿ ಬದ್ಧತೆ ಕಾಯ್ದುಕೊಂಡು ಬರವಣಿಗೆ ಮುಂದುವರೆಸಿದರೆ ಕಾವ್ಯದ ಪಲ್ಲವಿ ಒಡಗೂಡಿ ಧ್ವನಿ ತರಂಗದ ನಾದ ಹೊರಡಿಸಬಹುದು.
ಡಾ. ಕೆ. ಎನ್. ದೊಡ್ಡಮನಿ,
***
ಈ ಲೇಖನ ಹಂಚಿಕೊಳ್ಳಿ