ಬೆಳಗಾವಿ ಜಿಲ್ಲೆಯ ಎಸ್ ಆರ್ ಎಸ್ ಮಾದರಿ ಕಾರ್ಯವೆಂದು ಚುನಾವಣಾ ಆಯೋಗ ಪ್ರಶಂಸೆ :ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಆಗಸ್ಟ ೨೪ ರಿಂದ ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೋಟಿಸ್ ಜನರೇಟ್ ಮಾಡಿ, ನೋಟಿಸ್ ಗಳನ್ನು ಬಿ.ಎಲ್.ಓ.ಗಳು ಖುದ್ದಾಗಿ ಮತದಾರರ ಮನೆಗೆ ತಲುಪಿಸಿ ಮತದಾರರ ಸಹಿ ಹಾಗೂ ದಾಖಲೆಗಳನ್ನು ಸ್ವೀಕರಿಸುವ ಛಾಯಾ ಚಿತ್ರವನ್ನು ಮೋಬೈಲ್ ಆಪನಲ್ಲಿ ಕಡ್ಡಾಯವಾಗಿ ದಾಖಲಿಸಲು ತಿಳಿಸಿದರು.
ಅಸ್ಮಿತೆ ವರದಿ, ಅ.೨೧ : ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಬಿ.ಎಲ್.ಒ.ಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದು, ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು, ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಾಗಿ ಕೈಗೊಂಡಂತಹ ಕ್ರಮಗಳನ್ನು ಇತರೆ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.ಇದಕ್ಕೆ ಕಾರಣರಾದ ಅಧಿಕಾರಿ ವರ್ಗ, ರಾಜಕೀಯ ಪಕ್ಷ ಹಾಗೂ ಮಾಧ್ಯಮದವರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಭಿನಂದಿಸಿದರು.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಇಂದು ಜರುಗಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರದ ಚಟುವಟಿಕೆಗಳ ಕುರಿತು ಜರುಗಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವು ಬೆಳಗಾವಿ ಜಿಲ್ಲೆಯಲ್ಲಿ ಪಾರದರ್ಶಕತೆಯಿಂದ ನಡೆಯುತ್ತಿದೆ. ಆಗಸ್ಟ ೨೪ ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರದ ಚಟುವಟಿಕೆಗಳ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರದಲ್ಲಿ ೪೧,೦೭,೦೦೦ ಮತದಾರರಿಗೆ ಎನ್ಯೂಮರೇಷನ್ ಅರ್ಜಿಗಳನ್ನು ೪,೫೨೫ ಬಿ.ಎಲ್.ಓ. ಗಳ ಮೂಲಕ ವಿತರಿಸಲಾಗಿದ್ದು, ಈ ಪೈಕಿ ೩೫,೯೩,೫೬೧ ಅರ್ಜಿಗಳನ್ನು ಗಣಕೀಕರಣ ಮಾಡಲಾಗಿದೆ. ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದ ೩೬,೪೭೬ ಮತದಾರರ ಪೈಕಿ ೧,೩೪,೯೦೩ ಮೃತ ಮತದಾರರು, ೨೬,೪೫೯ ಗೈರು ಮತದಾರರು, ೨,೮೩,೨೪೯ ಶಾಶ್ವತ ಸ್ಥಳಾಂತರ ಮತದಾರರನ್ನು ಗುರುತಿಸಲಾಗಿದೆ. ಗೈರು, ಮೃತ ಹಾಗೂ ಸ್ಥಳಾಂತರಗೊಂಡಂತಹ ಮತದಾರರ ವಿವರಗಳನ್ನು ಈಗಾಗಲೇ ಸಂಬಂಧಿಸಿದ ಕಚೇರಿಗಳಿಗೆ ಸಲ್ಲಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗದಿದ್ದಲ್ಲಿ ಫಾರ್ಮ ನಂ.೬ರ ಮೂಲಕ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶವಿದೆ. ಈ ಕಾರ್ಯಕ್ಕೆ ಬ್ಲಾಕ್ ಮಟ್ಟದ ಅಧಿಕಾರಿಗಳ ಜೊತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ತಿಳಿಸಿದರು.
ಆಗಸ್ಟ ೨೪ ರಿಂದ ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೋಟಿಸ್ ಜನರೇಟ್ ಮಾಡಿ, ನೋಟಿಸ್ ಗಳನ್ನು ಬಿ.ಎಲ್.ಓ.ಗಳು ಖುದ್ದಾಗಿ ಮತದಾರರ ಮನೆಗೆ ತಲುಪಿಸಿ ಮತದಾರರ ಸಹಿ ಹಾಗೂ ದಾಖಲೆಗಳನ್ನು ಸ್ವೀಕರಿಸುವ ಛಾಯಾ ಚಿತ್ರವನ್ನು ಮೋಬೈಲ್ ಆಪನಲ್ಲಿ ಕಡ್ಡಾಯವಾಗಿ ದಾಖಲಿಸಲು ತಿಳಿಸಿದರು.
ಭಾರತದಲ್ಲಿ ೦೧-೦೭-೧೯೮೭ ಕ್ಕಿಂತ ಮೊದಲು ಜನಿಸಿದವರು ಸ್ವಂತ ದಾಖಲೆ ನೀಡಬೇಕಿದ್ದು, ೦೧-೦೭-೧೯೮೭ ರಿಂದ ೦೨-೧೨-೨೦೦೪ ರ ನಡುವೆ ಜನಿಸಿದವರು ಸ್ವಂತ ದಾಖಲೆಯೊಂದಿಗೆ ತಂದೆ ಅಥವಾ ತಾಯಿಯ ಹುಟ್ಟಿದ ದಿನಾಂಕ ಹಾಗೂ ಸ್ಥಳದ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೀಡಲಾದ ನೋಟಿಸಗಳ ವಿಚಾರಣೆಯನ್ನು ಜವಾಬ್ದಾರಿಯುತವಾಗಿ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿ ತಂತ್ರಾಂಶದಲ್ಲಿ ದಾಖಲಿಸಬೇಕು. ನೋಟಿಸ್ ಗೆ ಸಂಬಂಧಿಸಿದ ಅಹವಾಲುಗಳನ್ನು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಸೂಚಿಸಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಸಿದ್ದು ಹುಲ್ಲೋಳಿ, ಆ.೨೪ ರಂದು ಕರಡು ಪ್ರತಿಯನ್ನು ಪ್ರಕಟಿಸಿದ ನಂತರ ಒಂದು ತಿಂಗಳು ಕಾಲ ಆಕ್ಷೇಪಣೆಗಳನ್ನು ಸ್ವೀಕರಿಸಲು ಕಾಲಾವಕಾಶವಿರುತ್ತದೆ. ಜಿಲ್ಲೆಯ ಒಟ್ಟು ೧೮ ವಿಧಾನ ಸಭಾ ಕ್ಷೇತ್ರಗಳಿಗೆ ೧೨೬ ಹೆಚ್ಚುವರಿ ಎ.ಇ.ಆರ್.ಓ ಗಳನ್ನು ನೇಮಿಸಲಾಗಿದ್ದು ಇವರು ತಮ್ಮ ಲಾಗಿನ್ ನಲ್ಲಿ ನೋಟೀಸ್ ಜನರೇಟ್ ಮಾಡಬೇಕು. ನೋಟಿಸ್ ಸಂಬಂದಪಟ್ಟಂತೆ ಅಹವಾಲುಗಳನ್ನು ಆಲಿಸಲು ವಾರ್ಡವಾರು, ಗ್ರಾಮ ಪಂಚಾಯತಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಸಂಭವನೀಯ ತಪ್ಪುಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸುವುದು ಸೇರಿದಂತೆ ವಿವಿಧ ಹಂತಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಸಭೆಯಲ್ಲಿ ಪೋಲಿಸ್ ಆಯುಕ್ತ ಗುಲಾಬರಾವ್ ಭೂಷಣ ಭೊರಸೆ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗೀತಾ ಕೌಲಗಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬಾಗಲಕೋಟ ಅಪರ ಜಿಲ್ಲಾಧಿಕಾರಿ, ಎ.ಇ.ಆರ್., ಓ. ಇ.ಆರ್.ಓ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.
****
ಈ ಲೇಖನ ಹಂಚಿಕೊಳ್ಳಿ