ಬೃಹತ್ ಕನಸುಗಳೊಂದಿಗೆ ನಿರಂತರ ಶ್ರಮ ಅಗತ್ಯ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಅಸ್ಮಿತೆ ವರದಿ, ಅ.೨೫: "ಜೀವನ ಸಾಧನೆಯ ಆಕಾಂಕ್ಷಿಯ ಯುವಕರು ತಮ್ಮ ಬೃಹತ್ ಕನಸುಗಳೊಂದಿಗೆ ತಮ್ಮ ಮೇಲೆ ತಾವೇ ನಂಬಿಕೆ ಕಾಯ್ದುಕೊಂಡು, ನಿರ್ಧಿಷ್ಟ ಗುರಿಯ ಬೆನ್ನಿಗೆ ಬಿದ್ದು ನಿರಂತರ ಶ್ರಮಿಸಿ" ಯುವ ಸಮುದಾಯ ಐಕಾನ್ ಎಂದು ಗುರುತಿಸಲ್ಪಡುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮುಜಾವರ್ ಫೆಡರೇಶನ್ ಇಂದು ಬೆಳಗಾವಿ ಕ್ಯಾಂಪ್ ಪ್ರದೇಶದ ಇಸ್ಲಾಮಿಯಾ ಹೈಸ್ಕೂಲ್ ಹಾಜಿ ಅಬ್ದುಲ್ ಗಫರ್ ಮುಜಾವರ್ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ನಾಗರಿಕ ಸೇವೆಗಳ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ವಿದ್ಯಾರ್ಥಿಗಳು, ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಕರ ಹಂತಗಳನ್ನು ಜಯಸಾಧಿಸಲು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಸಾಮಾಜಿಕವಾಗಿ ಕೆಳ ಹಂತದಲ್ಲಿದ್ದಾಗ ನಿಮ್ಮೊಳಗಿನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಒಟ್ಟುಗೂಡಿಸಿ ಬಲವಾದ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಮುಂದುವರೆಯ ಧೈರ್ಯದ ಪ್ರವೃತ್ತಿ ರೂಢಿಸಿಕೊಳ್ಳಬೇಕು" ಎಂದು ಕರೆ ನೀಡಿದರು.

ಪೊಲೀಸ್ ಆಯುಕ್ತ ಭೋರಸೆ ಭೂಷಣ್ ಗುಲಾಬರಾವ್, "ಯುಪಿಎಸ್‌ಸಿ ತಯಾರಿಗೆ ವ್ಯವಸ್ಥಿತ ಅಧ್ಯಯನ, ಸಕಾಲಿಕ ಸೂಕ್ತ ಮಾರ್ಗದರ್ಶನ, ಗುಣಮಟ್ಟದ ತರಬೇತಿ ಪರಿಣಾಮಕಾರಿಯಾಗುತ್ತದೆ. ಸಾರ್ವಜನಿಕ ಸೇವೆ ಕೇವಲ ಉದ್ಯೋಗಕ್ಕೆ ಸೀಮಿತವಾಗದೆ ಸಮಾಜಕ್ಕೆ ಉಪಯುಕ್ತವಾದ ಕೊಡುಗೆ ನೀಡುವುದರ ಮೂಲಕ ಆಳವಾದ ತೃಪ್ತ ಭಾವ ಅನುಭವಿಸುವ ವಿಶಾಲ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು" ಎಂದು ತಿಳಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಕರ್ನಾಟಕ ರಾಜ್ಯ ಮುಜಾವರ್ ಫೆಡರೇಶನ್ ಅಧ್ಯಕ್ಷ ರೇಹಾನ್ ಮುಜಾವರ್, ರಾಜ್ಯ ಉಪಾಧ್ಯಕ್ಷ ಉಸ್ಮಾನ್ ಮುಜಾವರ್, ಮುಸ್ಲಿಂ ಶಿಕ್ಷಣ ಸಮಾಜದ ಅಧ್ಯಕ್ಷ ಅಬ್ದುಲ್ ರಶೀದ್ ಮುಜಾವರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
***
ಈ ಲೇಖನ ಹಂಚಿಕೊಳ್ಳಿ