ಸಾಂಸ್ಕೃತಿಕ ಮೆರುಗು ತಂದ ಯುವ ಸೌರಭ
ಅಸ್ಮಿತೆ ವರದಿ, ಜು.29: ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಂಗು ರಂಗಿನ ವೇಷ ಧರಿಸಿ ಜನಪದ ನೃತ್ಯ, ಗಾಯನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನದ ಮೂಲಕ ಯುವ ಸೌರಭ ವೇದಿಕೆ ಸೃಜನಶೀಲಗೊಳಿಸಿದ ಯುವ ಸಮುದಾಯದ ಕಾರ್ಯಕ್ರಮ ಇಂದು ಬೆಳಗಾವಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಇಂದು ಆಯೋಜಿಸಲಾದ ಯುವ ಸೌರಭ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಂಗಕರ್ಮಿ ರವಿ ಕೋಟಾರಗಸ್ತಿ, "ವಿದ್ಯಾರ್ಥಿಗಳು ಜನಪದ ಕಲೆ, ಸಾಹಿತ್ಯ ಅಭಿರುಚಿಯನ್ನು ರೂಢಿಸಿಕೊಳ್ಳಬೇಕು.ಈ ಹಿಂದೆ ಹಳ್ಳಿಗಳಲ್ಲಿ ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಜನಪದ ಸಾಹಿತ್ಯ, ನೃತ್ಯ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅದು ಕೇವಲ ಮನರಂಜನೆಯಾಗಿರದೇ ನಾಡಿನ ನಡೆ ನುಡಿ ಆಚಾರ ವಿಚಾರ ಹಾಗೂ ಹಳ್ಳಿಯ ಸಾಂಸ್ಕೃತಿಕ ಸೊಗಡನ್ನು ಸಾರುವಂತಾಗುತ್ತಿತ್ತು. ಇಂದು ಮೊಬೈಲ್ ಗೀಳಿನಲ್ಲಿ ಕಾಲ ಕಳೆಯುತ್ತಿರುವ ಮಕ್ಕಳು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾರೆ. ಇದರಿಂದ ಹೊರಬಂದು ದೈಹಿಕ ಹಾಗೂ ಮಾನಸಿಕ ಸದೃಢತೆ ಸಾಧಿಸಬೇಕಾದರೆ ಕಲೆ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಕ್ರೀಡೆಗಳಲ್ಲಿ ಮನಸಾರೆ ತೊಡಿಗಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ"ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ಚನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಕ್ಕ ಮಹಾದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೈಲಹೊಂಗಲ ಪ್ರಾಂಶುಪಾಲರು ಸಿ ಬಿ ಗನಾಚಾರಿ, ಮ.ನ.ರ ಸಂಘದ ಶಿಕ್ಷಣ ಮಾಹಾವಿದ್ಯಾಲಯ ಪ್ರಾಚಾರ್ಯೆ ನಿರ್ಮಲಾ ಭಟ್ಟಲ, ಸರ್ದಾರ್ ಸರ್ಕಾರಿ ಪಿ ಯು ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಸಂಯೋಜಕ ಎಮ್.ಎಮ್ ಮುಲ್ಲಾ, ಮಾಂತ ಬಿ.ಇಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ಸರ್ದಾರ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
**
ಈ ಲೇಖನ ಹಂಚಿಕೊಳ್ಳಿ