ಶರಣರ ಅನುಭಾವ ದರ್ಶನ ಮಾಡಿದ ಫ.ಗು.ಹಳಕಟ್ಟಿ ಅಪ್ಪಟ ಶರಣ - ನೀಲಕಂಠ ಭೂಮಣ್ಣವರ
ಅಸ್ಮಿತೆ ಸುದ್ದಿ : 12 ಶತಮಾನದ ಬಸವಣ್ಣಾದಿ ಶರಣರ ಅನುಭಾವ ತತ್ವ ದರ್ಶನದ ವಚನ ಸಂಪತ್ತನ್ನು ಸಂಪಾದಿಸಿ ಪ್ರಕಟಿಸಿದ ಡಾ. ಫ.ಗು. ಹಳಕಟ್ಟಿ ಅವರೂ ಒಬ್ಬ ಅಪ್ಪಟ ಶರಣ ಜೀವನ ನಡೆಸಿದವರು ಎಂದು ಪ್ರಾಧ್ಯಾಪಕ ನೀಲಕಂಠ ಭೂಮಣ್ಣವರ ಹೇಳಿದ್ದಾರೆ.
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿ ನಿಮಿತ್ತ ಬೆಳಗಾವಿಯ ಯುವ ಬರಹಗಾರರ ವೇದಿಕೆ ಮಾನವ ಬಂಧುತ್ವ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ.ಗು. ಹಳಕಟ್ಟಿಯವರು ಒಬ್ಬ ವಕೀಲರಾಗಿದ್ದುಕೊಂಡು ಆ ವೃತ್ತಿಯ ಮೂಲಕ ವೈಯಕ್ತಿಕ ಜೀವನಕ್ಕೆ ಬೇಕಾದ ಹಣ ಸಂಪತ್ತು ಗಳಿಸಬಹುದಿತ್ತು. ಆದರೆ, ತಮ್ಮ ಲೌಕಿಕ ಸುಖಾನುಭವವನ್ನು ತ್ಯಾಗ ಮಾಡಿ, ಶರಣರ ಜನಪರ ತತ್ವ ದರ್ಶನವನ್ನು ಜಾಗತಿಕ ವೇದಿಕೆಗೆ ತಂದುಕೊಡುವಲ್ಲಿ ಸ್ವತಃ ಶರಣ ಜೀವನ ಅನುಸರಿಸಿದರು ಎಂದು ತಿಳಿಸಿದರು.
ಶರಣರ ವಚನ ಕಟ್ಟುಗಳ ಸಂಗ್ರಹಕ್ಕಾಗಿ ಊರೂರು ಸಂಚರಿಸಿದರು. ವಚನಗಳ ಕಟ್ಟುಗಳನ್ನು ಪಡೆಯುವಲ್ಲಿ ಅಸಹನೀಯ ತೊಂದರೆ, ಅವಮಾನಗಳನ್ನು ಎದುರಿಸಿ ಸಂಗ್ರಹಿಸಿ ಸಂಪಾದಿಸಿದರು. ಪ್ರಕಟಣೆಯ ಮೂಲಕ ಬೆಳಕಿಗೆ ತರಲು ಸ್ವಂತ ಮನೆ, ಆಸ್ತಿಯನ್ನು ಅಡವಿಟ್ಟರು. ತೀವ್ರ ಆರ್ಥಿಕ ತೊಂದರೆ ಅನುಭವಿಸಿದ ಹಳಕಟ್ಟಿ ಅವರು ಒಂದು ಹೊತ್ತಿನ ಊಟಕ್ಕೆ ಪರಿತಪಿಸಿದ್ದಾರೆ. ತೊಡಲು ಯೋಗ್ಯ ಬಟ್ಟೆಯಿಲ್ಲದೆ ಜೀವಿಸಿದ್ದಾರೆ. ಅವರ ಲೌಕಕಿ ಬದುಕಿನ ಸುಖಕ್ಕಿಂತ ಶರಣರ ವಚನ ಸಂಪತ್ತಿನ್ನು ಕಟ್ಟಿಕೊಡುವ ಅಧ್ಯಾತ್ಮ ದುಡಿಮೆ ಪ್ರಧಾನವಾಗಿತ್ತು ಎಂದು ತಿಳಿಸಿದರು.

ಎಂ ಎನ್ ಮಾವಿನ ಕಟ್ಟಿ ಮಾತನಾಡಿ ವಿಶ್ವ ಮಾನ್ಯತೆಯ ವಚನ ಸಾಹಿತ್ಯವನ್ನು ಹಳಕಟ್ಟಿ ಯವರು ಪರಿಚಯಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಯುವ ಬರದಾರ ವೇದಿಕೆ ಅಧ್ಯಕ್ಷ ಪ್ರೊ. ದ್ಯಾಮಣ್ಣ ಸೊಗಲದ ಎಲೆಮರೆಕಾಯಿಯಂತೆ ಯುವ ಬರಹಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವುದು ಯುವ ಬರಹಗಾರರ ವೇದಿಕೆಯ ಉದ್ದೇಶವಾಗಿದೆ. ಸಮಾಜಕ್ಕೆ ದೇಶಕ್ಕೆ ಸೇವೆ ನೀಡಿದ ಮಹಾನ್ ವ್ಯಕ್ತಿಗಳ ಆದರ್ಶ ಜೀವನ ಮತ್ತು ಮೌಲ್ಯಗಳನ್ನು ಪರಿಚಯಿಸುವುದು ವೇದಿಕೆಯ ಪ್ರಧಾನ ಆಶಯವಾಗಿದೆ ಎಂದು ತಿಳಿಸಿದರು.
ಗಾಯಕ ಅಶೋಕ್ ಕಾಂಬಳೆ ವಚನ ಗಾಯನ ಮಾಡಿದರು.ರುದ್ರಪ್ಪ ಬಡಿಗೇರ್, ಸಿದ್ದರಾಮ್ ಸಿದ್ರಾಮನಿ,ಡಾ. ಹೊಂಬಯ್ಯ ಡಾ. ನಾಗರಾಜ್ ಮುರುಗೋಡ ಡಾ. ಮಂಜುನಾಥ್ ಡಾ. ಬಾಲಕೃಷ್ಣ ನಾಯಕ್ ಡಾ. ದೊಡ್ಡ ನಿಂಗಪ್ಪ ಗೋಳ ಡಾ. ಅಡಿವಪ್ಪ ಇಟ್ಟಿಗಿ ಡಾ. ಚಿಕ್ಮಟ್ ಡಾ. ನದಾಫ್ ಮೊದಲಾದವರು ಉಪಸ್ಥಿತರಿದ್ದರು
***
ಈ ಲೇಖನ ಹಂಚಿಕೊಳ್ಳಿ