ವೃತ್ತಿ ರಂಗಭೂಮಿಯ ಜೀವಂತಿಕೆಗೆ ಆಧುನಿಕ ಸ್ಪರ್ಶ
ಅಸ್ಮಿತೆ ವರದಿ, ಅ.8: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ವೃತ್ತಿ ರಂಗಭೂಮಿ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕಳೆದ ೧೫ ದಿನಗಳಿಂದ ಅಭಿನಯ ಸಹಿತ ರಂಗಸಂಗೀತ ಮಹಿಳಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಇಂದು ಕನ್ನಡ ಭವನದಲ್ಲಿ ಜರುಗಿತ್ತು.

ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಖ್ಯಾತ ಸಂಗೀತ ನಿರ್ದೇಶಕ ರಾಜಪ್ರಭು ದೋತ್ರೆ, ನಾಟಕಕಾರ ಶಿರೀಷ ಜೋಶಿ, ರಂಗಚಿಂತಕ ಡಾ. ರಾಮಕೃಷ್ಣ ಮರಾಠೆ, ಎನ್. ನಟರಾಜ್ ಸೇರಿದಂತೆ ಇತರೆ ರಂಗಾಸಕ್ತ ಗಣ್ಯರು ಉಪಸ್ಥಿತರಿದ್ದರು.
ಹೊಸ ತಲೆಮಾರಿಗೆ ಸಾಗಿಸಿ:
ಸಮಾರೋಪ ಮಾತಗಳನ್ನಾಡಿದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ವೃತ್ತಿ ರಂಗಭೂಮಿ ಪ್ರಭಾವ ಇಂದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ರಂಗಾಯಣ ಅಭಿನಯ ಸಹಿತ ರಂಗ ಸಂಗೀತ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವುದು ಇಂದು ತುಂಬಾ ಅಗತ್ಯವಿದೆ. ತರಬೇತಿ ಪಡೆದ ಮಹಿಳೆಯರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅಭಿನಯಿಸಿ ಹಾಡುವುದರ ಜೊತೆಗೆ ಶಾಲಾ ಕಾಲೇಜು ಮಕ್ಕಳಲ್ಲಿ ಆಸಕ್ತ ಮೂಡಿಸುವ ಪ್ರಯತ್ನ ಮುಂದುವರೆಸುವುದು ಸೂಕ್ತ ಎಂದು ತಿಳಿಸಿದರು.
ವೃತ್ತಿ ರಂಗಭೂಮಿಯ ಜೀವಂತಿಕೆಗೆ ಆಧುನಿಕ ಸ್ಪರ್ಶ:
ರಂಗಾಯನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, “ವೃತ್ತಿರಂಗಭೂಮಿಯ ಕಂಪನಿ ನಾಟಕಗಳಿಗೆ ೧೫೦ ವರ್ಷಗಳಿಗಿಂತ ಹೆಚ್ಚು ಚಾರಿತ್ರಿಕ ಇತಿಹಾಸವಿದೆ. ತನ್ನ ಕಲೆಯ ವೈಭವದ ಜೊತೆಗೆ ರಂಗ ಸಂಗೀತದ ರಂಗಗೀತೆಗಳ ದೊಡ್ಡಪರಂಪರೆಯಿದೆ. ಆದರೆ, ೬೦ ವರ್ಷಗಳಿಂದ ಈ ರಂಗಪರಂಪರೆಗೆ ಧಕ್ಕೆಯುಂಟಾಗಿದೆ. ಇಂಥ ಸಂದರ್ಭದಲ್ಲಿ ರಂಗ ಸಂಗೀತದ ಮೂಲಕ ವೃತ್ತಿ ರಂಗಭೂಮಿಯನ್ನು ಆಧುನಿಕಗೊಳಿಸುವ ಪ್ರಯತ್ನವನ್ನು ದಾವಣಗೆರೆ ರಂಗಾಯಣ ಮಾಡುತ್ತಿದೆ ಎಂದು ತಿಳಿಸಿದರು.
ಹಿಂದಿನ ವೃತ್ತಿ ರಂಗಭೂಮಿಯ ಮೂಲ ಪರಂಪರೆಯನ್ನು ಉಳಿಸಿಕೊಂಡು, ಅದಕ್ಕೆ ಆಧುನಿಕ ರಂಗಸಂವೇದನೆಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ವೃತ್ತಿ ರಂಗಭೂಮಿ ರಂಗಾಯಣ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದಾವಣಗೆರೆ ಮತ್ತು ಮೈಸೂರು ನಗರಗಳಲ್ಲಿ ಈ ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು, ಒಂದು ಕಾಲದಲ್ಲಿ ವೃತ್ತಿ ರಂಗಭೂಮಿಯ ಪ್ರಮುಖ ಕೇಂದ್ರವಾಗಿದ್ದ ಬೆಳಗಾವಿಯಲ್ಲಿಯೂ ಇದೇ ಮಾದರಿಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ಅಭಿನಯ - ರಂಗಗೀತೆ ಗಾಯನ:
ಕಾರ್ಯಾಗಾರದಲ್ಲಿ ತರಬೇತಿ ಪಡೆದ ಕಲಾವಿದರು ಕಂಪನಿ ನಾಟಕಗಳ ಸೊಗಡನ್ನು ನೆನಪಿಸುವ ಕಂದಪದ್ಯಗಳು, ರಂಗಗೀತೆಗಳು ಹಾಗೂ ಅಭಿನಯ ಸಮೇತ ರಂಗಸಂಗೀತ ಪ್ರದರ್ಶನ ವಿಶೇಷ ಗಮನ ಸೆಳೆಯಿತು.
***
ಈ ಲೇಖನ ಹಂಚಿಕೊಳ್ಳಿ