ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
19 ನವೆಂ 2026
ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ
🎭 ಸಾಂಸ್ಕೃತಿಕ
Dr. K N Doddmani · · 90 ವೀಕ್ಷಣೆಗಳು

ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ

ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ

ರಾಜ್ಯೋತ್ಸವ ಗೌರವ ಸನ್ಮಾನ ಸಂದರ್ಭದಲ್ಲಿ ಸಾಂಸ್ಕೃತಿಕ ವಿವೇಚನಾ ಅಭಿನಂದನೆ

(ಅಸ್ಮಿತೆಯ ವಿಶೇಷ ಲೇಖನ)

ಮರಾಠಿ ಭಾಷೆಯಲ್ಲಿ ಜನಪರ, ವೈಚಾರಿಕ, ಪ್ರಗತಿಪರ   ಸಾಹಿತ್ಯ – ಸಾಂಸ್ಕೃತಿಕ ವಿವೇಚನಾ ಪ್ರಖರತೆಗೆ ಬೆಳಗಾವಿಯಂತಹ ಗಡಿ ಪ್ರದೇಶ ಪ್ರಭಾವಕ್ಕೆ ಒಳಗಾಗುವುದು ಸಹಜ. ಈ  ಪರಸ್ಪರ ಸಾಂಸ್ಕೃತಿಕ ಒಳಗೊಳ್ಳುವಿಕೆಯ ಕಾರಣ ಈ ಭಾಗದಲ್ಲಿ ಇತ್ತೀಚೆಗೆ ಇಲ್ಲಿಯ ನೆಲದ ಸೃಜನಶೀಲತೆಗಿಂತ ಮರಾಠಿ ಭಾಷೆಯ ಅನುವಾದವೇ ಜಾಸ್ತಿ ಸದ್ದು ಮಾಡಿದೆ.  ಇದಕ್ಕೆ ಮರಾಠಿಯ  ಸಾಹಿತ್ಯ - ಸಾಂಸ್ಕೃತಿಕ  ಜನಪರ ಪ್ರಯೋಗಶೀಲ ಪ್ರಜ್ಞೆಯ ಪ್ರಭಾವಲಯದ  ಪ್ರಖರತೆ ಕಾರಣವಾದರೂ ಬೆಳಗಾವಿ ವಲಯ ನೆಲದ ವಾಸನೆಯ ಸೃಜನಶೀಲ ಪ್ರಯೋಗಶೀಲತೆಯ ಮಂಕುತನವೂ ಕಾರಣವಾಗಿದೆ. ಈ ಅನುವಾದ ಎಷ್ಟರ ಮಟ್ಟಿಗೆ ಬೆಳಗಾವಿ ನೆಲದ ಸೃಜನಶೀಲತೆಯನ್ನು ಮೂಲೆ ತಳ್ಳಿತು ಎಂದರೆ, ಅನುವಾದ ಸಾಹಿತ್ಯವೇ ಪ್ರಧಾನವಾದದ್ದು ಎಂದು ಬಲವಂತವಾಗಿ ಪ್ರಚಾರಕ್ಕೆ ತಂದು, ಒಂದು ಮಟ್ಟಿಗೆ ಇಲ್ಲಿಯ ಸೃಜನಶೀಲತೆಯನ್ನು ತುಳಿದು ಹಣ, ಪ್ರಶಸ್ತಿ, ಜನಪ್ರಿಯತೆ, ವಿದ್ವತ್‌ ಪ್ರದರ್ಶನದ ಬಂಡವಾಳವನ್ನಾಗಿಸಿತು.  ಇದರ ಪರಿಣಾಮ ಅಕ್ಷರಗಳ ಅನುವಾದಕರು ಹುಟ್ಟಿಕೊಂಡರು. ಈ ಮಧ್ಯ ಭಾವಾನುವಾದಕರು ಉಭಯ ಸಾಹಿತ್ಯದ ಶ್ರೀಮಂತಿಕೆಯನ್ನೂ ಹೆಚ್ಚಿಸಿ ಸಾಂಸ್ಕೃತಿಕ ಸೇತುವೆಯನ್ನು ಹಟ್ಟಿಗೊಳಿಸಿರುವುದು ಇಲ್ಲಿಯ ಅನುವಾದ ಸಾಹಿತ್ಯದ ವಿಶೇಷ ಸಾಧನೆ.

ಈ ಎರಡು ಬಗೆಯ ಅನುವಾದಕರ ಮಧ್ಯ ಡಿ.ಎಸ್.‌ ಚೌಗಲೆ ಅವರು ಇವುಗಳನ್ನು ಮೀರಿ  ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನದ ರಂಗಕರ್ಮಿಯಾಗಿ, ಬರಹಗಾರರಾಗಿ, ನೆಲದ ಕವಿಯಾಗಿ, ವಿಮರ್ಶಕರಾಗಿ, ಚಿತ್ರ ಕಲಾವಿದರಾಗಿ, ನಟರಾಗಿ, ಚಿಂತಕರಾಗಿ  ಹೀಗೆ ವಿಭಿನ್ನತೆಯ ಪ್ರಯೋಗಶೀಲ ಸೃಜನಶೀಲಕರಾಗಿ ಕಾಣಿಸಿಕೊಳ್ಳುತ್ತಾರೆ. ಪ್ರಾದೇಶಿಕ ಉಭಯ ಸಂಸ್ಕೃತಿಯೊಂದಿಗೆ ಡಿ.ಎಸ್.‌ ಚೌಗಲೆ ಅವರ ಬದುಕಿನ ತೀರ ಆತ್ಮೀಯ ಒಡನಾಟ ಕಾರಣ  ಈ ಸಂಸ್ಕೃತಿಯ ಒಳಹೊಕ್ಕು ನೋಡುವ ಸಾಧ್ಯತೆಯನ್ನು ಬೆಳೆಸಿಕೊಂಡು ಬಂದಿರುವುದರಿಂದ ಅವರ ಅನುವಾದಿತ ಕೃತಿಗಳು ವೈಚಾರಿಕವಾಗಿ ವಿಶೇಷ ಜನ ಮನ್ನಣೆ ಪಡೆದುಕೊಳ್ಳಲು ಸಾಧ್ಯವಾಗಿದೆ.  ಕೇವಲ ಕೃತಿಗಳ ಮೂಲಕ ಅನುವಾದಕರಾಗಿ ಮಾತ್ರ ಉಳಿದುಕೊಳ್ಳದೆ ಅವರಲ್ಲಿ ಅಗಮ್ಯ ನಾಟ್ಯದ ವಿಶೇಷ ಆಸಕ್ತಿ ಇರುವುದರಿಂದ ಅವುಗಳನ್ನು ರಂಗ ಪ್ರಯೋಗದ ಮೂಲಕ  ಪ್ರಜ್ಞಾವಂತ ಎಲ್ಲ ವರ್ಗಕ್ಕೂ ತಲುಪಿಸಿ ಸಾಂಸ್ಕೃತಿಕ ಅನುಸಂಧಾನದಲ್ಲಿ ಯಶಸ್ವು ಸಾಧಿಸುತ್ತಾರೆ.

ಆತ್ಮಗೌರವ, ಸ್ವಾಭಿಮಾನ ಒತ್ತೆಯಿಟ್ಟು ಬೂಟುಗಾಲುಗಳನ್ನು ನೆಕ್ಕಿ ಪ್ರಶಸ್ತಿ, ಪ್ರಚಾರಕ್ಕಾಗಿ ತೀರ ದುಂಬಾಲು ಬಿದ್ದು ಅವರು ಕೆಲಸ ಮಾಡಿದವರಲ್ಲ.  ಸಾಹಿತ್ಯ – ಸಾಂಸ್ಕೃತಿಕ ಒಂದು ಮಹತ್ವದ ಜವಾಬ್ದಾರಿ ಹೊತ್ತುಕೊಂಡು, ತಕ್ಕುದಾದ ವ್ಯಕ್ತಿತ್ವ ಕಾಯ್ದುಕೊಂಡು ನಿರಂತರ ಪ್ರಯೋಗಶೀಲತೆಯಲ್ಲಿತೊಂಡಗಿಕೊಂಡಿದ್ದರಿಂದ ಬೆಳಗಾವಿ  ಸಾಂಸ್ಕೃತಿಕ ವಲಯದಲ್ಲಿ ಡಿ.ಎಸ್.‌ ಚೌಗಲೆ   ಭಿನ್ನರಾಗಿ ಗಮನ ಸೆಳೆಯುತ್ತಾರೆ.

ಡಿ.ಎಸ್.‌ ಚೌಗಲೆ ಅವರ ಸಾಂಸ್ಕೃತಿಕ ಅನುಸಂಧಾನಕ್ಕೆ ಬೆಳಗಾವಿ  ಸಾಂಸ್ಕೃತಿಕ ಪರಿಸರ ಎಷ್ಟರ ಮಟ್ಟಿಗೆ ಅನುಕೂಲ, ಪ್ರೋತ್ಸಾಹ ನೀಡಿತೋ ಗೊತ್ತಿಲ್ಲ. ಆದರೆ, ಅದರ ಯಶಸ್ವಿ ಪ್ರಯೋಗಕ್ಕೆ ಕರ್ನಾಟಕದ ದಕ್ಷಿಣಕ್ಕೆ, ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಮುಂಬಯಿ ವೇದಿಕೆಗಳನ್ನು  ಅವರು ಹೆಚ್ಚು ಅವಲಂಭಿಸಿದರು. ಈ ಬಗ್ಗೆ ಅವರೊಂದಿಗೆ ವೈಯಕ್ತಿಕವಾಗಿ ವಿಚಾರಿಸಿದಾಗ  ಒಪ್ಪಿಕೊಂಡು “ನನ್ನ ಪ್ರಯೋಗಶೀಲತೆಗೆ ಆ ಪ್ರದೇಶಗಳ ವೇದಿಕೆಗಳು  ಉತ್ತೇಜನ ನೀಡುತ್ತ ಬಂದಿವೆ.  ಹೀಗಾಗಿ ಆ ಕಡೆ ಜಾಸ್ತಿ ವಾಲಿಕೊಂಡಿದ್ದೇನೆ” ಎಂದು ಮುಕ್ತವಾಗಿ ತಿಳಿಸಿದರು. ಅವರ ಹೇಳಿಕೆಯನ್ನು ಒಪ್ಪಿಕೊಂಡ ನಾನು “ ನಿಮ್ಮ ಪಯಣದ ಉದ್ದೇಶ ಸರಿಯಾಗಿದೆ. ಆದರೆ, ಸಿದ್ಧ ವೇದಿಕೆಯೊಂದಿಗೆ ಬೆಳೆಯುವುದರ ಜೊತೆಗೆ  ಸ್ವಂತ  ನೆಲದಲ್ಲಿಯೂ ವೇದಿಕೆ ನಿರ್ಮಿಸಿಕೊಳ್ಳುವುದು ಆದ್ಯ ಜವಾಬ್ದಾರಿಯಾಗುತ್ತದೆ. ಇಲ್ಲದೇ ಹೋದರೆ, ಅವಕಾಶವಾದದ ಪಲಾಯಣದಂತೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ” ಎಂದು ಸೂಚಿಸಿದಾಗ ಚೌಗಲೆ ಅವರು ಒಪ್ಪಿಕೊಂಡು ಪ್ರಯತ್ನಿಸುವ ಬಗ್ಗೆ ಭರವಸೆ ನೀಡಿದರು

ಡಾ. ಡಿ.ಎಸ್.‌ ಚೌಗಲೆ ಅವರು ಜನಿಸಿ, ಬೆಳೆದದ್ದು ಮಹಾರಾಷ್ಟ್ರದ ಗಡಿಯ ನಿಪ್ಪಾಣಿ ತಾಲೂಕಿನ ಬೇಡಿಕಿಹಾಳ ಗ್ರಾಮದಲ್ಲಿ. ನಿಪ್ಪಾಣಿ ತಾಲೂಕು ಮರಾಠಿ ಪ್ರಭಾವದ ಪ್ರದೇಶದ. ಆದರೆ, ಬೇಡಕಿಹಾಳ ಕನ್ನಡ ಅಸ್ಮಿತೆಯ ನೆಲ. ಮರಾಠಿ ಪ್ರಭಾವದದಲ್ಲಿ ಕನ್ನಡ ಅಸ್ಮಿತೆಯೊಂದಿಗೆ ಬೆಳೆದ ಚೌಗಲೆ ಅವರು  ಸಾಂಸ್ಕೃತಿಕ ಅನುಸಂಧಾನಕ್ಕೆ ಈ ನೆಲದ ಪ್ರಭಾವ ವಿಶೇಷ ಪಾತ್ರ ವಹಿಸುತ್ತದೆ. ಅವರ ಮರಾಠಿ ಅನುವಾದಿತ ಅವರ ಕೃತಿಗಳು ಕನ್ನಡಮಯವಾಗಿ, ಕನ್ನಡತ್ವದ ಪ್ರಯೋಗಗಳಾಗಿ ಮೂಲಕ ಲೇಖಕನನ್ನು ಮರೆತು ಚೌಗಲೆ ಅವರ ಸಂವೇದನೆಯನ್ನು ಎತ್ತಿ ಹಿಡಿಯುತ್ತವೆ. ಅವರ ಸ್ವತಂತ್ರ ಸೃಜನಶೀಲ ಕೃತಿಗಳು ಮರಾಠಿ ಚೌಕಟ್ಟಿನಲ್ಲಿ ಕನ್ನಡತ್ವದ ಕನ್ನಡಿಯಾಗಿವೆ.

ಸಾಹಿತ್ಯ ಕಲೆಯಲ್ಲಿ ಹೊಸತನದ  ವಿಭಿನ್ನ ಪ್ರಯೋಗಶೀಲತೆಯಲ್ಲಿ ಖುಷಿ ಕಂಡಿದ್ದರಿಂದ ಬಹುಮುಖ ವ್ಯಕ್ತಿತ್ವ ಸೃಷ್ಟಿಗೊಳ್ಳಲು ಸಾಧ್ಯವಾಗಿದೆ.  ನಾಟಕ ರಚನೆ, ಕಥಾಸಾಹಿತ್ಯ, ಕವನ ರಚನೆ, ಅನುವಾದ ಸಾಹಿತ್ಯ, ಚಿತ್ರಕಲೆ, ಕಲಾವಿಮರ್ಶೆ, ರಂಗಭೂಮಿ ಚಿಂತನೆ, ಅಂಕಣ ಬರಹ, ಸಿನಿಮಾ ನಿರ್ಮಾಣ, ನಟನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಮತ್ತು ದೃಶ್ಯಕಲೆಗಳೆರಡರಲ್ಲಿಯೂ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಿಸಿದ್ದಾರೆ.

·   ನಾಟಕ ಸಾಹಿತ್ಯದ ಕೊಡುಗೆ :

ಈಗಾಗಲೇ ಪ್ರಸ್ತಾಪಿಸಿರುವಂತೆ ಕನ್ನಡ ರಂಗಭೂಮಿಗೆ ಡಿ.ಎಸ್. ಚೌಗಲೆ ನ ಕೊಡುಗೆ ಅನನ್ಯವಾದದ್ದು. ದಿಶಾಂತರ, ವಖಾರಿಧೂಸ, ಕಸ್ತೂರಬಾ, ಉಧ್ವಸ್ಥ, ಉಚಲ್ಯಾ, ಜನಮಿತ್ರ ಅರಸು, ತಮಾಶಾ, ಸಾವಿತ್ರಿಬಾಯಿ ಫುಲೆ, ಸತ್ಯಶೋಧಕ  ಅವರ ಏಳು ನಾಟಕಗಳು ಸಾಮಾಜಿಕ ಬದುಕು, ಸಾಂಸ್ಕೃತಿಕ ಸಂಘರ್ಷ, ಚಾರಿತ್ರಿಕ ವ್ಯಕ್ತಿತ್ವಗಳು ಮತ್ತು ಸಮಕಾಲೀನ ಸಮಾಜದ ಪ್ರಶ್ನೆಗಳಿಗೆ ಸಂಬಂಧಿಸಿದ ವಿಷಯಗಳು ಜನಪರ ಆಶಯದ ವೈಚಾರಿಕೆ ನೆಲೆಗಟ್ಟು ಪಡೆದುಕೊಂಡಿವೆ.

  • ಗಾಂಧಿ ವರ್ಸಸ್ ಗಾಂಧಿ:

ಚೌಗಲೆ ಅವರ ಅನುವಾದ ಸಾಹಿತ್ಯದಲ್ಲಿ ವಿಶೇಷವಾಗಿ ಗುರುತಿಸಬೇಕಾದ ಕೃತಿ ಗಾಂಧಿ ವರ್ಸಸ್ ಗಾಂಧಿ. ಅವರನ್ನು ರಂಗ ವೇದಿಕೆಗೆ ಕಹಿಡಿದು ಕರೆತಂದ ಕೃತಿ. ಇದು ಮೂಲತಃ ಮರಾಠಿ ನಾಟಕಕಾರ ಅಜಿತ್ ದಳವಿ ಅವರ ಕೃತಿ. 1998ರಲ್ಲಿ ಮೈಸೂರಿನ ರಂಗಾಯಣ ಈ ನಾಟಕವನ್ನು ರಂಗಪ್ರಯೋಗಕ್ಕೆ ತಂದಿತು. ಈ ನಾಟಕದ ಮೂಲಕ ಮಹಾತ್ಮ ಗಾಂಧೀಜಿ ಮತ್ತು ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಭಾವನಾತ್ಮಕ ಸಂಘರ್ಷ, ಕೌಟುಂಬಿಕ ಸಂಬಂಧಗಳು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ರಂಗದ ಮೇಲೆ ಅನಾವರಣಗೊಂಡವು.

ಕನ್ನಡ ರಂಗಭೂಮಿಯಲ್ಲಿ ಈ ನಾಟಕ ಗಮನಾರ್ಹ ಯಶಸ್ಸು ಕಂಡಿತು. ದೀರ್ಘಕಾಲ ಪ್ರದರ್ಶನಗೊಂಡ ನಾಟಕಗಳಲ್ಲೊಂದು ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಈ ಹೆಗ್ಗಳಿಕೆ ಚೌಗಲೆ ಅವರ ರಂಗಪ್ರಯೋಗದ ಹೆಬ್ಬಾಗಿಲವೇ ತೆರೆದುಕೊಂಡಿತು.

·   ಅನುವಾದ ಸಾಹಿತ್ಯದ ಕೊಡುಗೆ :

ಅನವಾದದ ಕಾರಣ ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಾಹಿತ್ಯಿಕ ಸೇತುವೆಯಾಗಿ ಚೌಗಲೆ ಕಾರ್ಯನಿರ್ವಹಿಸಿದ್ದಾರೆ. ಗಾಂಧಿ ವರ್ಸಸ್ ಗಾಂಧಿ, ಮೂಲ ಲೇಖಕರು ಅಜಿತ್ ದಳವಿ, ಗಾಂಧಿ-ಅಂಬೇಡ್ಕರ್  ಮೂಲ ಪ್ರೇಮಾನಂದ ಗಜ್ವಿ, ಪೇಯಿಂಗ್ ಗೆಸ್ಟ್ ಮೂಲ ಅಭಿರಾಮ ಭಡ್ಕಮ್ಕರ್ , ಕಿರವಂತ , ಶುದ್ಧವಂಶ ಮೂಲ ಪ್ರೇಮಾನಂದ ಗಜ್ವಿ, ಚದುರಂಗ ಮತ್ತು ಕತ್ತೆ ಮೂಲ ಚಂಪಾ ದೇಶಪಾಂಡೆ, ಸತ್ಯಶೋಧಕ ಮರಾಠಿ ಮೂಲ ನಾಟಕ, ಉಚಲ್ಯಾ ಮರಾಠಿ ಮೂಲ ಕೃತಿ ಇದಲ್ಲದೆ 'ನೆರಳುಗಳು' ಎಂಬ ಅನುವಾದಿತ ಕಾದಂಬರಿ ಮತ್ತು 'ನಿನ್ನ ಮೇಲೆ ಸಿಟ್ಟಿಲ್ಲ ಮಾಯೀ' ಎಂಬ ಆಯ್ದ ಮರಾಠಿ ಕಥೆಗಳ ಸಂಕಲನ ಒಳಗೊಂಡು ಮರಾಠಿಯ ಮಹತ್ವದ ಕೃತಿಗಳನ್ನು ಸಮರ್ಥವಾಗಿ ಸ್ವತಃ ತಾವೇ ಅನುವಾದ ಮಾಡಿದ್ದಾರೆ.

ಅವರ ಅನುವಾದದ ಮಹತ್ವ ಕೇವಲ ಒಂದು ಭಾಷೆಯ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಪರಿಚಯಿಸುವುದಕ್ಕೆ ಸೀಮಿತವಾಗಿಲ್ಲ. ಮರಾಠಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಅನುಭವಗಳನ್ನು ಕನ್ನಡ  ಅಸ್ಮತೆಯೊಂದಿಗೆ ಓದುಗರಿಗೆ ಪರಿಚಯಿಸುವ ಕೆಲಸವನ್ನು ಅವರು ಮಾಡಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದ ಸಾಮಾಜಿಕ ಸುಧಾರಣಾ ಚಳವಳಿ, ಜಾತಿ ವ್ಯವಸ್ಥೆ, ಶೋಷಿತ ಸಮುದಾಯಗಳ ಬದುಕು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಸಂಬಂಧಿಸಿದ ನಾಟಕಗಳನ್ನು ಕನ್ನಡಕ್ಕೆ ತಂದು ಪ್ರಯೋಗಗೊಳಿಸಿರುವುದು ವಿಶೇಷ.

·    ಕಥಾಸಾಹಿತ್ಯ :

ಚೌಗಲೆ ಅವರ ಕಥೆಗಳಲ್ಲಿ ಗಡಿಭಾಗದ ಬದುಕು, ಗ್ರಾಮೀಣ ಸಂಸ್ಕೃತಿ, ಜನಸಾಮಾನ್ಯರ ಸಂಕಷ್ಟ, ಸಾಮಾಜಿಕ ಬದಲಾವಣೆ ಮತ್ತು ಮನುಷ್ಯ ಸಂಬಂಧಗಳು ಪ್ರಮುಖವಾಗಿ ಬಿಂಬಿತಗೊಂಡಿವೆ. ವಾರಸಾ, ಒಡಲ ಉರಿಯ ಹೊತ್ತು, ಚೌಗಲೆ ಕತೆಗಳು, ಜಂಗು ಹಿಡಿದ ಬ್ಲೇಡು, ಸೀಮಿಗೊಂದ ಅಟಾಟಿ, ಹಳದಿ ಕಣ್ಣಿನ ಸಾವು ಅವರ ಪ್ರಮುಖ ಕಥಾ ಸಂಕಲನಗಳು.  'ವಾರಸಾ' ಕಥಾಸಂಕಲನದಲ್ಲಿ ಕನ್ನಡ-ಮರಾಠಿ ಗಡಿಭಾಗದ ಜನಜೀವನ, ಸಾಮಾಜಿಕ ವಾಸ್ತವಗಳು, ಆರ್ಥಿಕ ಬದಲಾವಣೆಗಳು ಮತ್ತು ಕೆಳಸ್ತರದ ಜನರ ಬದುಕಿನ ಹೋರಾಟಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ.

·   ಕಾದಂಬರಿ ಮತ್ತು ಕಾವ್ಯ :

ಕಾದಂಬರಿ ಬರೆಯುವಲ್ಲಿ ಯಶಸ್ವು ಸಾಧಿಸಿದ ಡಿ.ಎಸ್.‌ ಚೌಗಲೆ  “ಸದರಬಜಾರ್” ಕೃತಿ ರಚಿಸಿದ್ದಾರೆ.  ನಾಟಕವೂ ಒಂದು ಕಾವ್ಯವಾಗುವುದರಿಂದ “ಸುಡು ಕಾವಿನ ಒಣ ಎಲೆ” ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವುಗಳ ಮೂಲಕ ಕಥೆ ಮತ್ತು ನಾಟಕಗಳಾಚೆಗೂ ತಮ್ಮ ಸಾಹಿತ್ಯಿಕ ಅಭಿವ್ಯಕ್ತಿಯನ್ನು ವಿಸ್ತರಿಸಿದ್ದಾರೆ.

·   ಚಿತ್ರಕಲಾ ಕ್ಷೇತ್ರದ ಸಾಧನೆ :

 ಡಾ. ಡಿ.ಎಸ್.‌ ಚೌಗಲೆ ಅವರ ಮತ್ತೊಂದು ಪ್ರಮುಖ ಸೃಜನಶೀಲ  ಗುರುತು ಚಿತ್ರಕಲೆ.

ಇವರು ತೈಲವರ್ಣ ಮತ್ತು ಅಕ್ರಿಲಿಕ್ ಮಾಧ್ಯಮಗಳಲ್ಲಿ ಆಕರ್ಷಕ  ಚಿತ್ರಗಳನ್ನು ರಚಿಸಿದ್ದಾರೆ.

ಗ್ರಾಮೀಣ ಬದುಕು, ಜನಪದ ಸಂಸ್ಕೃತಿ, ಸ್ಥಳೀಯ ಆಚರಣೆಗಳು, ಮನುಷ್ಯ ಮತ್ತು ಪ್ರಕೃತಿಯ ಸಂಬಂಧ, ಜಾಗತೀಕರಣದ ಪರಿಣಾಮಗಳು, ಸ್ಥಳೀಯ ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆಗಳು ಅವರ ಚಿತ್ರಕಲೆಯ ಪ್ರಮುಖ ಸಂವೇದನೆಗಳಾಗಿವೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನ್ ಮತ್ತು ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಟರ್ಕಿಯ ಎಸ್ಕಿಶೆಹಿರ್‌ನಲ್ಲಿ ನಡೆದ ಮೂರನೇ ಹಾನ್ ಅಂತಾರಾಷ್ಟ್ರೀಯ ಕಲಾ ಸಿಂಪೋಸಿಯಂನಲ್ಲಿಯೂ ಭಾಗವಹಿಸಿದ್ದಾರೆ.

·   ಕಲಾವಿಮರ್ಶೆ ಮತ್ತು ರಂಗಚಿಂತನೆ :

ಈ ಕ್ಷೇತ್ರದಲ್ಲಿಯೂ ಅವರ ಚೌಗಲೆ ಅವರ  ಕೊಡುಗೆ ಗಮನಾರ್ಹವಾಗಿದೆ. ಬಣ್ಣ ಬಯಲು — ಕಲಾವಿಮರ್ಶೆ, ಬಣ್ಣ ನನ್ನ ಕಣ್ಣೊಳಗೆ — ದೃಶ್ಯಕಲೆಗೆ ಸಂಬಂಧಿಸಿದ ಲೇಖನಗಳು, ತೆರೆ ಸರಿದ ಮೇಲೆ — ರಂಗಭೂಮಿ ಕುರಿತ ಲೇಖನಗಳು, ಕನ್ನಡ-ಮರಾಠಿ ಆಧುನಿಕ ರಂಗಭೂಮಿ — ಸಂಶೋಧನಾ ಕೃತಿ. ವಿಶೇಷವಾಗಿ ಕನ್ನಡ ಮತ್ತು ಮರಾಠಿ ರಂಗಭೂಮಿಯ ಬೆಳವಣಿಗೆ, ಪ್ರಯೋಗಗಳು ಹಾಗೂ ಸಾಂಸ್ಕೃತಿಕ ಸಂಬಂಧಗಳ ಅಧ್ಯಯನದಲ್ಲಿ ಅವರ ಸಂಶೋಧನಾ ಕೃತಿ ಆಕರತೆ ಹೊಂದಿದೆ.

·   ಅಂಕಣ ಬರಹ :

ಡಿ.ಎಸ್.‌ ಚೌಗಲೆ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಪ್ರತಿ ತಿಂಗಳು ಬರೆದ ಅಂಕಣ ಬರಹಗಳ ಸಂಕಲನವೇ ಖಾತೆಕೀರ್ದಿ. ಈ ಕೃತಿಯು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನು ಪರಿಚಯಿಸುವ ಬರಹಗಳ ಸಂಗ್ರಹವಾಗಿದೆ.

· ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಗಳು :

ಚೌಗಲೆ ಅವರು ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರು, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರು, ರಂಗಾಯಣದ ರಂಗಸಮಾಜದ ಸದಸ್ಯರು, ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ನಾಟಕ ವಿಭಾಗಗಳಲ್ಲಿಯೂ ರಂಗತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

·    ಪ್ರಶಸ್ತಿ ಮತ್ತು ಗೌರವಗಳು :

 ಸಿಕ್ಕ ಮಾಹಿತಿ ಪ್ರಕಾರ ಡಾ. ಡಿ.ಎಸ್.‌ ಚೌಗಲೆ ಅವರಿಗೆ  16ಕ್ಕೂ ಹೆಚ್ಚು ಪ್ರಶಸ್ತಿ-ಗೌರವಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಂಬಂಧಿಸಿದ ಪ್ರಶಸ್ತಿಗಳೂ ಸೇರಿವೆ. ಪ್ರಸ್ತುತ ಇವರ ಸಾಹಿತ್ಯ- ಸಾಂಸ್ಕೃತಿಕ ಸೇವೆಯನ್ನು ಮನ್ನಿಸಿರುವ ರಾಜ್ಯ ಸರ್ಕಾರ  ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು  ಪ್ರಶಸ್ತಿಯ ಘನತೆ ಹೆಚ್ಚಿರುವಲ್ಲಿ ಸಂಶಯವಿಲ್ಲ.

ಡಾ. ಡಿ.ಎಸ್.‌ ಚೌಗಲೆ ಅವರ ಒಟ್ಟು ಕೊಡುಗೆಯನ್ನು ಗಮನಿಸಿದಾಗ,  ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳು, ಜನಜೀವನ ಮತ್ತು ಸಾಮಾಜಿಕ ವಾಸ್ತವಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಚಿಂತನೆ, ಸಾಮಾಜಿಕ ಸುಧಾರಣೆ, ಜಾತಿ ವ್ಯವಸ್ಥೆ ಮತ್ತು ಶೋಷಿತ ಸಮುದಾಯಗಳ ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ರಂಗಭೂಮಿಗೆ ತಂದಿದ್ದಾರೆ. ಮರಾಠಿ ಸಾಹಿತ್ಯದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಎರಡು ಭಾಷೆಗಳ ಸಾಹಿತ್ಯಿಕ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ. ನಾಟಕ, ಕಥೆ, ಕವನ ಮತ್ತು ಚಿತ್ರಕಲೆಗಳಲ್ಲಿ ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿದ್ದಾರೆ. ಗ್ರಾಮೀಣ ಬದುಕು, ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು ಮತ್ತು ಜಾಗತೀಕರಣದ ಪರಿಣಾಮಗಳನ್ನು ತಮ್ಮ ಸೃಜನಶೀಲತೆಯ ಮೂಲಕ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ಡಾ. ಡಿ.ಎಸ್. ಚೌಗಲೆ ಅವರನ್ನು ಕೇವಲ ಒಬ್ಬ ನಾಟಕಕಾರ ಅಥವಾ ಅನುವಾದಕ ಎಂದು ಗುರುತಿಸುವುದಕ್ಕಿಂತ, ಕನ್ನಡ ಮತ್ತು ಮರಾಠಿ ಸಾಹಿತ್ಯ-ಸಂಸ್ಕೃತಿಗಳ ನಡುವಿನ ಅನುಸಂಧಾನಕಾರರಾಗಿ ಗುರುತಿಸುವುದು ಹೆಚ್ಚು ಸೂಕ್ತ. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನು ಸಮನ್ವಯಗೊಳಿಸಿರುವ ಅವರ ಕಾರ್ಯ ಕನ್ನಡದ ಬಹುಮುಖ ಸೃಜನಶೀಲ ಪರಂಪರೆಯಲ್ಲಿ ಅಧ್ಯಯನಯೋಗ್ಯವಾದುದು. ಅವರ ಕೃತಿಗಳಲ್ಲಿ 'ಗಾಂಧಿ-ಅಂಬೇಡ್ಕರ್', 'ಸತ್ಯಶೋಧಕ', 'ಉಚಲ್ಯಾ' ಮತ್ತು 'ಕಸ್ತೂರಬಾ' ನಾಟಕಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ  ಸಾಮಾಜಿಕ ಚಿಂತನೆ, ಅನುವಾದದ ದೃಷ್ಟಿಕೋನ ಮತ್ತು ರಂಗಭೂಮಿಯ ಆಶಯಗಳನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಬಹುದು.

-       ಡಾ. ಕೆ.ಎನ್.‌ ದೊಡ್ಡಮನಿ

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ