"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ"
‘ಪತ್ರಕರ್ತರೂ ಭ್ರಷ್ಟರಾಗಿದ್ದಾರೆ, ದುಡ್ಡು ತೆಗೆದುಕೊಂಡು ಬರೆಯುತ್ತಾರೆ ಎಂದು ಜನ ಮಾತನಾಡಿಕೊಳ್ಳುವುದು ಸಹಜವಾಗಿದೆ. ಆದರೆ, ಏನೂ ಪಡೆಯದೇ ಬರೆಯುವ ಪತ್ರಕರ್ತರೂ ನಮ್ಮ ನಡುವೆ ಇದ್ದಾರೆ. ಅವರಿಂದು ಏಕಾಂಗಿ ಆಗುತ್ತಿದ್ದಾರೆ. ಭವಿಷ್ಯದ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ’ - ಎಚ್.ಆರ್. ಶ್ರೀಶ
ಇಮಾಮ್‌ಹುಸೇನ್ ಗೂಡುನವರರಿಗೆ ‘ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ
ಅಸ್ಮಿತೆ ವರದಿ, ನ.೧೪: "ಪತ್ರಕರ್ತ ಸಾಮಾಜಿಕ ಜವಾಬ್ದಾರಿಯಿಂದ ನುಣಿಚಿಕೊಂಡರೆ ಸತ್ಯ ಸಾಯುತ್ತದೆ. ಅಂಜಿಕೆ ಇಲ್ಲದೇ ಜವಾಬ್ದಾರಿ ಹೊರುವ ಯುವ ಪತ್ರಕರ್ತರು ಬರಬೇಕಿದೆ" ಎಂದು ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ಅಧ್ಯಕ್ಷ ಪ್ರೊ.ಕೆ.ವಿ.ನಾಗರಾಜ್ ಹೇಳಿದ್ದಾರೆ.
ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್‌ನಿಂದ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಜಾವಾಣಿ’ ವರದಿಗಾರ ಇಮಾಮ್‌ಹುಸೇನ್ ಗೂಡುನವರ ಅವರಿಗೆ ‘ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
"ಪದವಿ ಮುಗಿಸಿದ ಯಾರಾದರೂ ಡಾಕ್ಟರ್, ಎಂಜಿನಿಯರ್, ಸರ್ಕಾರಿ ನೌಕರ ಆಗಬೇಕೆಂಬ ಬಯಕೆ ವ್ಯಕ್ತಪಡಿಸುತ್ತಾರೆ. ಪತ್ರಕರ್ತ ಆಗಬೇಕೆಂದು ಯಾರೂ ಕನಸು ಕಾಣುತ್ತಿಲ್ಲ. ಅಪ್ಪಿ–ತಪ್ಪಿ ಪತ್ರಕರ್ತನಾದೆ ಎಂದು ಹೇಳುವವರೆ ಹೆಚ್ಚು. ಹೀಗಾಗಿ, ಪತ್ರಕೋದ್ಯಮ ಕೂಡ ಈಗ ದಾರಿ ತಪ್ಪುತ್ತಿದೆ. ವೈಯಕ್ತಿಕ ಹಿತಾಸಕ್ತಿ ಸಾಮಾಜಿಕ ಜವಾಬ್ದಾರಿಯನ್ನು ನುಂಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ್, "ಮಾಧ್ಯಮ ರಂಗದಲ್ಲಿ ಕೂಡ ಹೈಬ್ರಿಡ್ ಸಂಸ್ಕೃತಿ ಬಂದು ಜವಾರಿ ಸಂಸ್ಕೃತಿ ಮರೆಯಾಗುತ್ತಿದೆ. ನಾಗರಿಕತೆಯ ಮುಂದೆ ದೊಡ್ಡ ಸವಾಲುಗಳಿವೆ. ಪತ್ರಕರ್ತರು ನಾಗರಿಕತೆಯನ್ನು ಎಚ್ಚರಿಸದೇ ಇದ್ದರೆ ಮುಂದೆ ದೊಡ್ಡ ಗಂಡಾಂತರಗಳು ಎದುರಾಗುವ ಆತಂಕವಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

"ಕಳಕಳಿ ಇರುವ, ಬದ್ಧತೆ ಇರುವ, ಸತ್ಯದ ಪರ ನಿಲ್ಲುವ ಹಾಗೂ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಬರೆಯುವ ಪತ್ರಕರ್ತರಿಗೆ ಸಮಾಜ ಕಾಯುತ್ತಿದೆ. ನಾಗರಿಕತೆಯ ಮೌಲ್ಯಗಳನ್ನು ಮುಂದುವರಿಸಬೇಕಾದ ಜವಾಬ್ದಾರಿಯೂ ಮಾಧ್ಯಮ ರಂಗದ ಮೇಲಿದೆ" ಎಂದೂ ಹೇಳಿದರು.
‘ಇಂಥ ಸಂದರ್ಭದಲ್ಲಿ ಸಮಾಜವನ್ನೂ ಎಚ್ಚರಿಸುವ, ಸಾಮಾಜಿಕ ನ್ಯಾಯಕ್ಕಾಗಿ ವ್ಯವಸ್ಥೆಯನ್ನೂ ಎದುರು ಹಾಕಿಕೊಳ್ಳುವ ಪತ್ರಕರ್ತರು ಇದ್ದಾರೆ. ಅಂಥವರಲ್ಲಿ ಬಿ.ಆರ್.ರೋಹಿತ್ ಕೂಡ ಒಬ್ಬರಾಗಿದ್ದರು. ಅವರು ಅಕಾಲಿಕ ಅಗಲಿದ್ದು ಮಾಧ್ಯಮ ರಂಗದ ಹಾನಿ’ ಎಂದು ಪ್ರೊ. ತ್ಯಾಗರಾಜ್ ಹೇಳಿದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ, "ಭ್ರಷ್ಟ ವ್ಯವಸ್ಥೆ ಸರಿಪಡಿಸುವ ಜತೆಗೇ ಪ್ರಭುತ್ವದ ವಿರುದ್ಧ ಜನರನ್ನು ಎಚ್ಚರಿಸುವ ಹಾಗೂ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಜವಾಬ್ದಾರಿ ಪತ್ರಕರ್ತರ ಮೇಲಿದೆ."ಪತ್ರಕರ್ತರೂ ಭ್ರಷ್ಟರಾಗಿದ್ದಾರೆ, ದುಡ್ಡು ತೆಗೆದುಕೊಂಡು ಬರೆಯುತ್ತಾರೆ ಎಂದು ಜನ ಮಾತನಾಡಿಕೊಳ್ಳುವುದು ಸಹಜವಾಗಿದೆ. ಆದರೆ, ಏನೂ ಪಡೆಯದೇ ಬರೆಯುವ ಪತ್ರಕರ್ತರೂ ನಮ್ಮ ನಡುವೆ ಇದ್ದಾರೆ. ಅವರಿಂದು ಏಕಾಂಗಿ ಆಗುತ್ತಿದ್ದಾರೆ. ಭವಿಷ್ಯದ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.
"ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗಗಳ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಈಚೆಗೆ ನಡೆದ ಕೆಪಿಎಸ್‌ಸಿ ಹಗರಣವನ್ನು ಗಮನಿಸಿದರೆ; ಮೊದಲಿನ ಮೂರೂ ಅಂಗಗಳು ವಿಫಲವಾದವು. ಪತ್ರಿಕಾರಂಗವೂ ತಾನು ಮಾಡಬೇಕಾದ ಕೆಲಸ ಮಾಡಲಿಲ್ಲ. ಪತ್ರಿಕೋದ್ಯಮ ಮೂಲ ಯಾವುದಕ್ಕೆ ಆಧಾರವಾಗಿರಬೇಕೋ ಅದೇ ಶಿಥಿಲಗೊಳ್ಳುತ್ತಿದೆ. ಇದು ಚಿಂತೆ ಮಾಡಬೇಕಾದ ಸಂದರ್ಭ" ಎಂದು ಎಚ್ಚರಿಸಿದರು.
ದಿವಂಗತ ರೋಹಿತ್ ಅವರ ತಂದೆ ಸಿ.ರಾಜಣ್ಣ ಹಾಗೂ ತಾಯಿ ಕೆ.ವಿ. ಲಲಿತಾ ಪ್ರಶಸ್ತಿ ಪ್ರದಾನ ಮಾಡಿದರು. ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿರು. ಪ್ರಶಸ್ತಿ ಸ್ವೀಕರಿಸಿದ ಇಮಾಮ್‌ಹುಸೇನ್ ಗೂಡುನವರ ತಮ್ಮ ವೃತ್ತಿ ಜೀವನದ ಹೆಜ್ಜೆಗಳನ್ನು ಮೆಲಕು ಹಾಕಿದರು.
ಪತ್ರಕರ್ತರಾದ ಹೃಷಿಕೇಶಿ ಬಹಾದ್ದೂರ ದೇಸಾಯಿ ಸ್ವಾಗತಿಸಿದರು. ಸಂಗಮೇಶ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಾಂತ ಎಸ್. ಶೆಂಬೆಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಈ ಲೇಖನ ಹಂಚಿಕೊಳ್ಳಿ