ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ
ಅಸ್ಮಿತೆ ವರದಿ, ಜು.26: ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್ (ಮರಾಠಾ ಲಘು ಪದಾತಿದಳ)ದಲ್ಲಿ ಇಂದು 26ನೇ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು. ಯುದ್ಧ ಸ್ಮಾರಕಕ್ಕೆ ಪುಷ್ಪಾಚಾರಣೆ ಮಾಡಿ ಯೋಧರಿಗೆ ಗೌರವ
ಶ್ರದ್ಧಾಂಜಲಿ ಸಲ್ಲಿಸಿ, 1999 ರ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರ ಸೈನಿಕರಿಗೆ ಸಾಹಸಕ್ಕೆ ನಮನ ಸಲ್ಲಿಸಲಾಯಿತು.
ಮರಾಠಾ ಎಲ್‌ಐಆರ್‌ಸಿಯ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಅವರು, ಕಾರ್ಗಿಲ್ ಹೋರಾಟದಲ್ಲಿ ಗೆಲವು ತಂದುಕೊಟ್ಟ ಯೋಧರ ಅಪ್ರತಿಮ ಧೈರ್ಯ, ಅಚಲ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆ ಅನನ್ಯವಾದದ್ದು. ಸೈನಿಕರ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಹೋನ್ನತ ಸಂಘರ್ಷವಾಗಿದ್ದು, ಭಾರತದ ಗೆಲವಿನ ಐತಿಹಾಸಿಕ ಸ್ಮರಣೆಯಾಗಿದೆ ಎಂದು ತಿಳಿಸಿದರು.
ಕಾರ್ಗಿಲ್ ವಿಜಯ ರೆಜಿಮೆಂಟ್‌ನ ಶಾಶ್ವತ ಶೌರ್ಯದ ಪರಂಪರೆ ಹಾಗೂ ಮುಂದಿನ ಪೀಳಿಗೆಗೆ ಸೇವಾ ಮನೋಭಾವವನ್ನು ರವಾನಿಸುವುದನ್ನು ಸಂಕೇತಿಸುತ್ತದೆ. ಧೀರ ಸೈನಿಕರು ತಮ್ಮ ಅನುಕರಣೀಯ ಧೈರ್ಯದ ಮೂಲಕ ರೆಜಿಮೆಂಟ್‌ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೆಜಿಮೆಂಟಲ್ ಸೆಂಟರ್‌ನ ಅಧಿಕಾರಿಗಳು, ಜೆಸಿಒಗಳು, ಇತರ ಶ್ರೇಣಿಗಳು ಮತ್ತು ಅಗ್ನಿವೀರರು ಭಾಗವಹಿಸಿದ್ದರು, ಅವರು ಮಡಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಕಾರ್ಗಿಲ್ ಯೋಧರ ಧೈರ್ಯ, ದೇಶಭಕ್ತಿ ಮತ್ತು ಅತ್ಯುನ್ನತ ತ್ಯಾಗದಿಂದ ಪ್ರೇರಿತರಾಗಿ ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ಪುನರುಚ್ಚರಿಸಿದರು.
***
ಈ ಲೇಖನ ಹಂಚಿಕೊಳ್ಳಿ