ಬೆಳಗಾವಿ ಪಾಲಿಕೆಗೆ ಅನುದಾನ ಬಿಡುಗಡೆ ಮಾಡದಂತೆ ಗಡಿ ಕನ್ನಡ ಸೇನೆ ಆಗ್ರಹ
ಅಸ್ಮಿತೆ ವರದಿ, ಜು.14: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ", " ಗಡಿ ವಿವಾದಕ್ಕೆ ಮಹಾಜನ ವರದಿಯೇ ಅಂತಿಮ" ಎಂದು ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರವ ಬೆಳಗಾವಿ ಮಹಾನಗರ ಪಾಲಿಕೆ 250 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬಾರದು ಎಂದು ಗಡಿನಾಡು ಕನ್ನಡ ಸೇನೆ ಸರ್ಕಾರಕ್ಕೆ ಆಗ್ರಹ ಪಡಿಸಿದೆ.
ಇಂದು ಮುಂಜಾನೆ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರು ಮಹಾಪೌರರ ಹಾಗೂ ಉಪ ಮಹಾಪೌರರ ವಿರುದ್ಧ ಪ್ರತಿಭಟನೆ ನಡೆಸಿ ಆಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಬಳಿ ಹೋಗಿ ಅನುದಾನ ಕೋರುವ ಸೌಜನ್ಯವನ್ನು ತೋರದ ಮಹಾಪೌರರು ಮತ್ತು ಉಪ ಮಹಾಪೌರರು ಕರ್ನಾಟಕ ಸರಕಾರದ ಬದಲಾಗಿ ಮಹಾರಾಷ್ಟ್ರ ಸರಕಾರದಿಂದ ಅನುದಾನ ಕೇಳಬೇಕೆಂದು ಬಲರಾಮ ಮಾಸೇನಟ್ಟಿ ವ್ಯಂಗ್ಯ ಮಾಡಿದ್ದಾರೆ.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಸ್ವೀಕರಿಸಿ, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುವವರಿಗೆ ಯಾವುದೇ ಕಾರಣಕ್ಕೂ ಅನುದಾನ ಕೊಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ,ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಮೂಲಕ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಹಾಗೂ ಸಂಘಟನೆಯ ಇತರ ಮುಖಂಡರು ಇಂದು ಮನವಿ ಸಲ್ಲಿಸಿದ್ದಾರೆ. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿರಾದಾರ ಅವರು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂತೋಷ ಮಾಸೇನಟ್ಟಿ,ಸಂತೋಷ ತಳ್ಳಿಮನಿ,ಎಸ್.ಎಸ್.ಮೂಕನವರ,ಮಂಜುನಾಥ ಶಾನುರ ಮುಚ್ಚಂಡಿ, ಜ್ಯೋತಿಕುಮಾರ, ಹುಲೆನ್ನವರ,ರಾಹುಲ್ ಭೋಸ್ಲೆ,ಆನಂದ ಬಿಲಾವರ,ಶಿವಾಜಿ ಗುರವ,ಸಾಗರ ಪೂಜೇರಿ, ಅನು ಎಸ್.ಆರ್ ಹಾಗೂ ವಂದನಾ ಹೊರಕೇರಿ ಮುಂತಾದವರು ಉಪಸ್ಥಿತರಿದ್ದರು.
ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೆಟ್ಟಿಯಾದ ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರರು ಬೆಳಗಾವಿ ನಗರಾಭಿವೃದ್ಧಿ ಹಾಗೂ ಸೌಂದರ್ಯಿಕರಣಕ್ಕಾಗಿ 250 ಕೋಟಿ ರುಪಾಯಿ ವಿಶೇಷ ಅನುದಾನ ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದರು.
**
ಈ ಲೇಖನ ಹಂಚಿಕೊಳ್ಳಿ