ಸಕಾಲಕ್ಕೆ ಮಾಹಿತಿ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ
ಅಸ್ಮಿತೆ ವರದಿ, ಜು.28: ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಅಪೇಕ್ಷಿಸಿದ ಅರ್ಜಿದಾರನಿಗೆ ಸಕಾಲಕ್ಕೆ ಮಾಹಿತಿ ಒದಗಿಸದ ಹುಬ್ಬಳ್ಳಿ ತಾಲ್ಲೂಕಿನ ತಹಶೀಲ್ದಾರ ಸೇರಿ, ಸಿಂದಗಿ ಪುರಸಭೆ ಮಾಹಿತಿ ಅಧಿಕಾರಿ ಮತ್ತು ಗಜೇಂದ್ರಗಡ ತಾಲ್ಲೂಕು ಇಟಿಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ತಲಾ 10 ಸಾವಿರ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠದ ಮಾಹಿತಿ ಆಯುಕ್ತರು ಆದೇಶಿಸಿದ್ದಾರೆ.
ಈ ಮೂವರು ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ಒದಗಿಸದ ಕಾರಣ ಅರ್ಜಿದಾರ ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಪೀಠ ತಹಶೀಲ್ದಾರ ಸೇರಿ ಮೂವರು ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ತಲಾ 10 ಸಾವಿರ ದಂಡ ವಿಧಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಮೇಲ್ಮನವಿ ಸಲ್ಲಿಸಿದ ಅರ್ಜಿದಾರ ಅನುಭವಿಸಿದ ಕಷ್ಟ ಮತ್ತು ಇತರೆ ವೆಚ್ಚಗಳಿಗಾಗಿ 5 ಸಾವಿರ ಪರಿಹಾರವನ್ನೂ ನೀಡುವಂತೆ ಹುಬ್ಬಳ್ಳಿ ತಾಲ್ಲೂಕು ನವನಗರ ಹೆಸ್ಕಾಂ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಹಣಕಾಸು ನಿಗಮದ ಉಪಲೆಕ್ಕ ನಿಯಂತ್ರಣಾಧಿಕಾರಿಗೆ ಆದೇಶಿಸಲಾಗಿದೆ.
ನಿಗದಿತ ಕಾಲಮಿತಿಯಲ್ಲಿ ಸೂಕ್ತ ಮಾಹಿತಿ ಒದಗಿಸದೇ ಇಂಥ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಎಚ್ಚರಿಕೆ ನೀಡಿದ್ದಾರೆ
**
ಈ ಲೇಖನ ಹಂಚಿಕೊಳ್ಳಿ