232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ
ಕಂದಾಯ ಅಧಿಕಾರಿಗಳ ದೀರ್ಘಕಾಲದ ಕಾಯುವಿಕೆಗೆ ಅಂತ್ಯ: ಅರ್ಹತೆಯ ಮನ್ನಣೆ ಹಾಗೂ ಆಡಳಿತ ಯಂತ್ರದ ಬಲವರ್ಧನೆ
ಅಸ್ಮಿತೆ ಸುದ್ದಿ: ಗ್ರೇಡ್-2 ತಹಶೀಲ್ದಾರ್ ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಬೇಕೆಂಬ ಬಹುಕಾಲದ ಬೇಡಿಕೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಸರ್ಕಾರವು ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಅರ್ಹತೆಗೆ ಅನುಸಾರವಾಗಿ ಬಡ್ತಿ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಇದು ಕೇವಲ ಆಡಳಿತಾತ್ಮಕ ಮೈಲುಗಲ್ಲಷ್ಟೇ ಅಲ್ಲ. ಬದಲಿಗೆ ನ್ಯಾಯಬದ್ಧ, ಪಾರದರ್ಶಕ ಹಾಗೂ ಸಮಯೋಚಿತ ನಿರ್ಧಾರಗಳ ಮೂಲಕ ಆಡಳಿತ ಯಂತ್ರವನ್ನು ಬಲಪಡಿಸುವ ಸರ್ಕಾರದ ದೃಢವಾದ ಬದ್ಧತೆಯಾಗಿದೆ.
ಒಟ್ಟು 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, "ಸರ್ಕಾರವು ಅರ್ಹತೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಸದಾ ಪ್ರೋತ್ಸಾಹಿಸುತ್ತದೆ" ಎಂಬ ವಿಶ್ವಾಸವನ್ನು ನೌಕರ ವರ್ಗದಲ್ಲಿ ಮೂಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.
ಬಲಿಷ್ಠ ಮತ್ತು ಸ್ಫೂರ್ತಿದಾಯಕ ಆಡಳಿತ ಯಂತ್ರವೇ ಪರಿಣಾಮಕಾರಿ ಆಡಳಿತದ ಬುನಾದಿ. ಕಂದಾಯ ಇಲಾಖೆಯು ಪ್ರತಿಯೊಬ್ಬ ನಾಗರಿಕರಿಗೂ ಪಾರದರ್ಶಕ, ಉತ್ತರದಾಯಿ ಹಾಗೂ ಕಾಳಜಿಯುಕ್ತ ಸೇವೆಯನ್ನು ಒದಗಿಸಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪದ ಭಾಗವೇ ಈ ಮಹತ್ವದ ನಿರ್ಧಾರವಾಗಿದೆ. ಈ ಕಾರ್ಯವನ್ನು ಸುಗಮವಾಗಿ ಸಾಕಾರಗೊಳಿಸಿದ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅವರೆಲ್ಲರ ಶ್ರಮ ಮತ್ತು ಸಹಕಾರವು ಮುಂಬರುವ ದಿನಗಳಲ್ಲಿ ಇಂತಹ ಮತ್ತಷ್ಟು ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸ್ಫೂರ್ತಿದಾಯಕವಾಗಿದೆ.
ಕಂದಾಯ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯ ಗಮನಕ್ಕೆ ತರಬಯಸುವ ಪ್ರಮುಖ ವಿಚಾರವೆಂದರೆ - ಸರ್ಕಾರವು ನಿಮ್ಮ ಸೇವಾ ಬದ್ಧತೆಯನ್ನು ಗುರುತಿಸುತ್ತದೆ, ನಿಮ್ಮ ಕಳಕಳಿಯನ್ನು ಆಲಿಸುತ್ತದೆ ಹಾಗೂ ನಿಮ್ಮ ಆಕಾಂಕ್ಷೆಗಳನ್ನು ಸಹ ಪರಿಗಣಿಸುತ್ತದೆ. ಸ್ವಯಂಸ್ಫೂರ್ತಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗವು ಯಾವುದೇ ಸರ್ಕಾರಕ್ಕೆ ಅತಿ ದೊಡ್ಡ ಆಸ್ತಿ. ನ್ಯಾಯಯುತವಾದ, ಸಮಾನ ಅವಕಾಶಗಳಿರುವ ಹಾಗೂ ವೃತ್ತಿ ನೈಪುಣ್ಯತೆಗೆ ಒತ್ತು ನೀಡುವ ಆಡಳಿತ ಸಂಸ್ಕೃತಿಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ