ಲಿಂಗ ತಾರತಮ್ಯ ಮನಸ್ಥಿತಿಯ ಕಾರಣ ಮಹಿಳಾ ಸ್ಥಾನಮಾನ ಕಡೆಗಣನೆ - ರಾಣಿ ಚೆನ್ನಮ್ಮನ ನೆಲದಲ್ಲಿ ಗುಡುಗಿದ ಚುಕ್ಕಿ ನಂಜುಂಡಸ್ವಾಮಿ
" ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರದ ಮೇಲಾಗುವ ದುಷ್ಪರಿಣಾಮ ನೇರವಾಗಿ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಲಿಂಗ ತಾರತಮ್ಯ ಮನಸ್ಥಿತಿಯ ಕಾರಣ ಮಹಿಳಾ ಸ್ಥಾನಮಾನ ಕಡೆಗಣನೆ - ರಾಣಿ ಚೆನ್ನಮ್ಮನ ನೆಲದಲ್ಲಿ ಗುಡುಗಿದ ಚುಕ್ಕಿ ನಂಜುಂಡಸ್ವಾಮಿ
ಅಸ್ಮಿತೆ ವರದಿ, ಅ.೨೩: ಜಗತ್ತಿನ ಮೇಲೆ ಅಧಿಪತ್ಯ ಸ್ಥಾಪಿಸಿದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತದಲ್ಲಿ ಮೊದಲಸಲ ಧ್ವನಿಎತ್ತಿ, ಯುದ್ಧ ಭೂಮಿಯಲ್ಲಿ ಬ್ರಿಟಿಷ್ ಅಧಿಕಾರಿಯ ಹೆಣ ಮಲಗಿಸಿದ ರಾಣಿ ಚೆನ್ನಮ್ಮನ ಕಿತ್ತೂರಿನ ನೆಲದಲ್ಲಿ ವಿಜಯೋತ್ಸವವನ್ನು ಜನಪರ ಹೋರಾಟಗಾರ್ತಿ ,ವೀರ ಮಹಿಳೆ ಚುಕ್ಕಿ ನಂಜುಂಡಸ್ವಾಮಿ ಅವರು ಉದ್ಘಾಟಿಸಿರುವುದು ರಾಣಿ ಚೆನ್ನಮ್ಮನ ವೀರತ್ವ, ಸ್ವಾಭಿಮಾನಕ್ಕೆ ಗೌರವ ಸಂದಂತಾಗಿದೆ.

ಮೂರು ದಿನಗಳ ಸಂಭ್ರಮದ ಕಿತ್ತೂರು ಉತ್ಸವದ ಉದ್ಘಾಟನೆಯ ನಂತರ ಮಹಿಳೆಯರ, ರೈತಪರ ಗುಡುಗಿದ್ದಾರೆ. "ಕನ್ನಡನಾಡಿನ ಪ್ರತಿಯೊಬ್ಬ ಮಹಿಳೆ ಚನ್ನಮ್ಮನ ತರಹ ಸ್ವಾಭಿಮಾನಿ, ಧೈರ್ಯಶೀಲರಾಗಿ ಇರಬೇಕಿತ್ತು. ಆದರೆ ಸಮಾಜದ ಮನಸ್ಥಿತಿಯಲ್ಲಿ ಮಹಿಳೆಯ ಸ್ಥಾನಮಾನ ಬೇರೆಯದೇ ಇದೆ. ಭಾರತದಲ್ಲಿ ಪ್ರತಿ 18 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ. ಸಾವಿರದಲ್ಲಿ ಇಪ್ಪತ್ತೈದು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಹೆಣ್ಣುಮಕ್ಕಳಿಗೆ ಜನ್ಮ ತಳೆಯುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸುವ ಮನಸ್ಥಿತಿಯ ಈ ಸಮಾಜದಲ್ಲಿ ಲಿಂಗ ತಾರತಮ್ಯದ ಬಗ್ಗೆ ಇನ್ನೂ ಅರ್ಥವಾಗಬೇಕಿದೆ" ಎಂದು ಲಿಂಗತಾರಮ್ಯತೆಯ ವಿರುದ್ಧ ಧ್ವನಿ ಎತ್ತಿದ್ದಾರೆ.
"ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಅಸ್ಮಿತೆ.ಸ್ವಾಭಿಮಾನ, ಆತ್ಮಗೌರವದ ಧ್ವನಿಯಾದವರು ಚನ್ನಮ್ಮ. ಬ್ರಿಟೀಷರ ಅನ್ಯಾಯದ ಕಾನೂನುಗಳ ವಿರುದ್ಧ, ಅಸಮಾನತೆ ವಿರುದ್ಧ ಹೋರಾಡಿದ್ದು ಚನ್ನಮ್ಮ" ಚೆನ್ನಮ್ಮ ಇತಿಹಾಸ ನೆನಪಿಸಿದ ಚುಕ್ಕಿ ಅವರು, "ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಕನಿಷ್ಠ ಪಿಯುಸಿವರೆಗೆ ಸ್ಥಳೀಯವಾಗಿ ಶಿಕ್ಷಣ ಸಿಗುವ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕು; ಈ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸರಕಾರದ ಮೂಲಕ ಪ್ರಯತ್ನಿಸಬೇಕು" ಎಂದು ಒತ್ತಾಯಿಸಿದರು.
ರೈತರಪರ ಮಾತನಾಡಿದ ಅವರು, " ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರದ ಮೇಲಾಗುವ ದುಷ್ಪರಿಣಾಮ ನೇರವಾಗಿ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು. ವಾಣಿಜ್ಯ ಬೆಳೆ ಕಬ್ಬು ಬೆಳೆಯುವವರ ಆರ್ಥಿಕ ಪರಿಸ್ಥಿತಿಯೇ ಚೆನ್ನಾಗಿಲ್ಲದಿರುವಾಗ ಸಜ್ಜೆ, ಗೋದಿ, ರಾಗಿ ಬೆಳೆಯುವ ರೈತರ ಪರಿಸ್ಥಿತಿ ಯಾವ ಮಟ್ಟದ್ದಿದೆ ಎಂಬುದನ್ನು ಊಹಿಸಬಹುದಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಸರಕಾರ ಗಮನಿಸಬೇಕು' ಎಂದು ಆಗ್ರಹಿಸಿದರು.
***
ಈ ಲೇಖನ ಹಂಚಿಕೊಳ್ಳಿ